ಏಕಮೇವ ಕಥೆಗಾರ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ
ಕ್ಷಣವೂ ಕಾಯಲು ಸಂಯಮವಿಲ್ಲದಂತೆ ಅತಿ ಕಾಮಾವಸ್ಥೆ
ಕಾಮಾತುರನು ಕುಮಾರಿಯ ಮಾತೆಯಾಗಿಸಿದಂತಹ ಅವಸ್ಥೆ
ಕುಮಾರನಿವ ಹುಟ್ಟಿದಾಗಲೇ ಮಹಾಜ್ಞಾನಿ ವ್ಯಾಸನಿವನಷ್ಟೇ
ಉಂಡನೋ, ಮಿಂದನೋ, ಗುಟುಕು ನೀರು ಕುಡಿದಿರಬೇಕಷ್ಟೇ
ಚಂಡಿಯ, ಅವಳ ಗಂಡನ ಕಥೆಯಿಂದ ಓ ನಮಃ ಅಂದನಷ್ಟೇ
ಸಾವಿರಾರು ಮಹಾ ಪಾತ್ರಗಳ ಹೆಣೆದು ಕಥೆಯ ಬೆಳೆಸಿದಾತ
ಕಾವಿ ಮಾತ್ರವೇ ಧರಿಸಿದರೂ, ಕಾಮದ ಸಿಹಿಯನ್ನು ಬೆರೆಸಿಬಿಟ್ಟ
ಘಾಸಿ ಅತಿಯಾದ ಋಷಿಗಳಿಂದ ರಾಜವಂಶವನು ಉಳಿಸಿಕೊಟ್ಟ
ದಾಸಿಯರಿಗೆ ತಾಪಸಿಯಿಂದ ನಿಧಾನಿ ವಿದುರ ಜ್ಞಾನಿಯ ಹುಟ್ಟಿಸಿಟ್ಟ
ಪಾಂಡುವಾದರೇನು ಕುಂತಿಗಿಲ್ಲವೇ ವರ ಋಷಿಗಳ ಮಂತ್ರದ ತಂತ್ರ?
ಅಂಡವು ಬ್ರಹ್ಮಾಂಡ ಸಮದ ಗಾಂಧಾರಿಯವಳು ಕುರುಡನ ಹೆಂಡತಿ!
ರಾಜಧಾನಿಯಿಂದ ಬೆಳೆಯಿತು ಕಥೆಯು ಕಾಡಿಗೆ; ವೇಷ ಮರೆಸುವ ಗತಿ
ಲಜ್ಜೆಯಿಂದ ನಡೆದರೂ ಪಾಂಚಾಲಿಯ ಗೆಜ್ಜೆ ನಿನಾದ ಕರೆದಿತ್ತು ಕೈಯೆತ್ತಿ
ನೀಚ ಕೀಚಕನ ತೊಡೆಯ ಹೊಡೆದೆಬ್ಬಿಸಿತ್ತು; ಮಲ್ಲ ಗಂಡನ ಕೆರಳಿಸಿತ್ತು
ಹುಚ್ಚೆಬ್ಬಿಸಿತ್ತು ದುರ್ಯೋಧನನ ತೊಡೆಗೆ; ಭೀಮನ ಗಧೆಯ ಪೆಟ್ಟಿಗೆ ಬಿದ್ದಿತ್ತು
ಹದಿನೆಂಟು ಇವನಿಗೆ ಮಹಾಪ್ರಾಣ; ಹದಿನೆಂಟರ ಭಗವದ್ಗೀತೆಯು ಹಾಡಿತ್ತು
ಎದಿರು ಯುಧ್ಧ ಕಾದಿದ್ದರೂ, ಕಾದುವ ಮುಂಚೆ ಕೃಷ್ಣನ ಹೆಸರಿನಲ್ಲಿ ಅಧ್ಯಾತ್ಮವಿತ್ತು
ಬೆಲ್ಲಕ್ಕೆ ಹೊಲಸು ಬೆರೆಸಿ, ಛಲಕ್ಕೆ ಒಲವು ಸೇರಿಸಿ, ನವರಸ ಮಸಾಲೆ ಔತಣವಿತ್ತ
ಮಲ್ಲರನು ಮಲ್ಲರೊಡನೆ ಸೆಣೆಸಿ, ಬಾಣದಿಂದ ಬಾಣವನ್ನು ಕತ್ತರಿಸಿ ರಣವ ನಡೆಸಿದ್ದ
ಎಷ್ಟೋ ಅಕ್ಶೋಹಣಿ ಯೋಧರನು ಯುಧ್ಧದಲಿ ರಕ್ತವನು ಕಾರಿಸಿ ನೆಲಕ್ಕೆ ಉರುಳಿಸಿದ್ದ
ಕಷ್ಟ ಕಾರ್ಪಣ್ಯದಲಿ ನಿನ್ನೆ, ಮೊನ್ನೆಯೋ ವಧುವಾದ ಯುವತಿಯರ ವಿಧವೆಯರನಾಗಿಸಿದ್ದ
ಕವಿವರನ ತಲೆಯಲ್ಲಿ ಕುಣಿದ, ಕೆರಳಿದ, ಮೆರೆದ, ಕಣ್ಣೀರಿಟ್ಟ ಕ್ಷಣಗಳು ಎಣಿಸಲಾಗದಷ್ಟು
ಕವಿವಾಣಿಗೆ ಸಕಲ ರೀತಿಯಲಿ ಅನುಕಂಪಿಸಿದರು ಮತ್ತೆ ಮತ್ತೆ ರಸಿಕರು ಸಾವಿರ ಕೋಟಿಯಷ್ಟು