Wednesday, August 8, 2012

ಆದರದ ಕರೆ, ಬಲು ದೂರದ ಕರೆ


ಆದರದ ಕರೆ, ಬಲು ದೂರದ ಕರೆ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ನಿಮ್ಮ ತಲೆ ಮೇಲೆ, 
ಬಲು ದೂರದಲಿ
ಎತ್ತಲೋ ಇರುವ ತಾರೆಯನು
ಸುತ್ತುತಿರುವ ಪೃಥ್ವಿಯಂತದೆಯೇ 
ಗುಂಡು ಗುಂಡಾಗಿ ಇದೆಯಂತೆ 
ಅಲ್ಲಿಂದ ಸಂಕೇತದಲಿ ಕರೆಯುತಿಹರು 
"ನಾವೂ, ನೀವೂ ಒಂದೇ ತರಹ"
"ನಾವೆಲ್ಲಾ ನಿಮ್ಮ ಗೊತ್ರದಲ್ಲಿಯೇ ಹುಟ್ಟಿ"
"ಸಂಕೆತಾಕ್ಷತೆ ಚುಮುಕಿಸುತಿಹೆವು"

"ಪನ್ನೀರ ದಾನಿ ಕಾದಿದೆ, ಗುಲಾಬಿ,
ಜಿಲೇಬಿ, ಲಾಡು, ಮೈಸೂರು ಪಾಕೂ
ನಿಮಗೆಂದೇ ಮಾಡಿಹೆವು"

"ಬರಬೇಕು, ಬರಲೇ ಬೇಕು ಬ್ರಾಹ್ಮಣರೆಲ್ಲಾ
ಸಂಸಾರ ಸಮೇತ, ಆತುರದಲಿ ಅತಿಥಿಗಳೆಲ್ಲ
ದಯ ಮಾಡಿಸ ಬೇಕು"

"ಗೊತ್ತಿರ ಬೇಕಲ್ಲವೇ ನಿಮಗೆಲ್ಲಾ
ನಾವು ಸಪ್ತರ್ಷಿ ಮಂಡಲದ ನಿಮ್ಮ ಪೂರ್ವಿಕರು"

ಮತ್ತೆ ಮತ್ತೆ ಹುಟ್ಟಿ ಬರುವ ನೀನೋ


ಮತ್ತೆ ಮತ್ತೆ ಹುಟ್ಟಿ ಬರುವ ನೀನೋ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ಮುಗುಳು ನಗೆಯಲಿ, ಮುರಳೀಧರ ಬಾರೋ 
ಕಂಗಳಿಗೆ ಮಂಗಳ ಬೆಳಕಿನಾರತಿಯ ತಾರೋ

ಕಂದರೆಲ್ಲರೂ ಮನೋಹರ ಸುಂದರ ರೂಪ ತಾಳಿ
ಕಂಡವರ ಗುಂಡಿಗೆಯಲಿ ಬಿಂಬ ನಿನ್ನದೇ ಕಾಣಲಿ

ಹೊಟ್ಟೆಯಲಿ ನವಮಾಸ ಹೊತ್ತ ಎಲ್ಲಾ ದೇವಕಿಯರು
ಪುಟ್ಟ ಕೂಸನು ಸೊಂಟದಲಿ ಇಟ್ಟಾಗ ನೀನೇ ತೋರು

ನಿತ್ಯ ಅವತಾರನು ಸಂತರ ಮತಿಯಲಿ ಅಲ್ಲವೇನೋ?
ಮತ್ತೆ, ಮತ್ತೆ ಮನೆಮನೆಯಲೂ ಹುಟ್ಟಿ ಬರುವ ನೀನೋ

ನಮಗೇಕೆ ಬೇಕು ಚಿನ್ನ?

ನಮಗೇಕೆ ಬೇಕು ಚಿನ್ನ?
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ಅಮೆರಿಕಾಗೆ ಹೋಗಲಿ, ಬ್ರಿಟಿಷರಿಗೆ ಕೊಡಲಿ
ಚೈನಾಗೆ ಎಲ್ಲರಿಗಿಂತಾ ಅತಿ ಹೆಚ್ಚು ಚಿನ್ನ

ನಮಗೆ ಸಾಕಷ್ಟು ಇದೆಯಲ್ಲಾ ತೆಂಗಿನ ಚಿಪ್ಪು
ನಮಗಿಂತಾ ಮೀರಿದವರು ಕೊಬ್ಬಿನಲಿ ಯಾರೂ

ಒಲಂಪಿಕ್ಸ್ ಪಂದ್ಯಗಳಲ್ಲಿ ಸರಿಯಾವುದೂ ಇಲ್ಲಪ್ಪ
ನಮಗೋಸ್ಕರವೇ ಬೇಕು ಇನ್ನೊಂದು ರೀತಿಯ ಪಂದ್ಯ  

ವೇದಾಂತದ ಹೆಸರಿನಲ್ಲಿ ಕಾಡು ಹರಟೆ; ಬೆಳಿಗ್ಗೆ, ರಾತ್ರಿ
ವೇದಾಂತ ಎಂದುಕೊಂಡು ಬರೀ ಬೊಕಳೆಯ ಟೊಳ್ಳು

ನಮ್ಮ ಪೋಲಿ ರಾಜಕೀಯರನು ಲಂಚದಲಿ ಮೀರಿಸುವರಿಲ್ಲ
ಜಾತಿ ಬೇಧಕ್ಕೆ, ಎಲ್ಲಾ ಜಾತಿಯವರ ದರಿದ್ರಕ್ಕೆ ಕಾರಣ ದಾರ

ಮಂತ್ರಿಯ ಕೆಲಸಕ್ಕೆ ನಮ್ಮ ಜಾತಿಯೇ ಆಗಬೇಕ್ಕು ಸ್ವಾಮಿ
ಬೇರೆಯವರು ಗೆದ್ದಾಗ ಅವರವರ ಜಾತಿಗೆ ಮಂತ್ರಿ ಆಸನ

ಲೂಟಿ ಮಾಡುವುದಕ್ಕೆ ಗಣಿಯ ಕನ್ನ ನಮ್ಮ ಅಮ್ಮನಿಗೆ ಹಾಕಿ
ಕೋಟಿ ಲೆಕ್ಕದಲಿ ನಮಗೆ, ನಮ್ಮ ಜಾತಿಯವರಿಗೆ ಹುಟ್ಟಿನ ಹಕ್ಕು 

ನಮ್ಮ ದೇಶದ ಎಲ್ಲಾ ಬಡತನಕ್ಕೆ ಲೋಕವನ್ನೇ ಬಯ್ಯುವ ಧಿಕ್ಕು; ಹೆಮ್ಮೆಗೇ ತ್ಯಾಗ
ಬಾರಿನ ತೀರ್ಥಕ್ಕೆ ಬಾಯಾರಿಕೆ; ಸೋಮಾರಿ ವೀರರು ನಾವು; ಯಾರಿಗೂ ಕಡಿಮೆಯಲ್ಲ

Tuesday, August 7, 2012

ನಾಲಿಗೆ ಮುಂದೋ? ತಲೆಯು ಮುಂದೋ?


ನಾಲಿಗೆ ಮುಂದೋ? ತಲೆಯು ಮುಂದೋ?
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ಅಡೆ, ಈರುಳ್ಳಿ ದೋಸೆ, ಮಸಾಲೆ ದೋಸೆ
ರವೆ ದೋಸೆ, ಪೆಸರಟ್ಟು ನಿಧಾನದಿ ಬಂದುವೆ?

ರವೆ ಇಡ್ಲಿ, ಮಸಾಲೆ ಇಡ್ಲಿ, ಡೋಕಳಾ ಗಳು
ನುಚ್ಚಿನುಂಡೆ ನಾಲಿಗೆಗೆ ಬಿದ್ದ ಮೇಲೆ ಬಂದುವೋ?

ಸ್ವಲ್ಪ ಯೋಚನೆ ಮಾಡಿ; ಆಮೇಲೆ ನಾಲಿಗೆಗೆ ಸೇವೆ
ನಾಲಿಗೆ ಮುಂದು, ತಲೆಗೆ ಯಾಕೆ ರಜೆ ಕೊಡುತ್ತೀವಿ?

Saturday, August 4, 2012

ದಾಹವೊಂದಿದ್ದರೆ ಸಾಕು


ದಾಹವೊಂದಿದ್ದರೆ ಸಾಕು
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ತುಂಬಿ, ತುಂಬಿ ಉಂಬುವ ದುಂಬಿಯು ಆನು
ಉಂಡು ಕಕ್ಕಿದ ಎಂಜಲು ಅತಿ ಮಧುರ ಜೇನು

ಅಂತರಾತ್ಮದಲಿದೆ ಹಸಿವು ಹಗಲೂ ಇರುಳೂ 
ಸಂತನಂತೂ ನಾನಲ್ಲ, ಚಿಂತನವಿಂತೂ ಬರದು

ದಾಹ ಮಾತ್ರ ಈ ದೇಹದಲಿ ಇಹಕ್ಕೆ ಬಂದಾಗಿತ್ತ್ತು
ಮಹಾ ಮಂತ್ರಗಳ ಅಂತರಾರ್ಥ ಅರಿವಾಗದ ಚಿತ್ತ 

ಭರ ಭರದಿ ಧುಮ್ಮಿಕ್ಕಿ ಸುರಿಯುತ್ತದೆ ಸುರ ಜೇನು 
ಹರ ಸಾರ ಧಾರಾಮೃತ ಉಣಿಸುವ ಕಾಮಧೇನು 

ಚಿತ್ತವ ಚಾಚುವ ಗೋಚಿಲ್ಲ, ಹುಚ್ಚು ಹಿಡಿದರೆ ಸಾಕು
ಮಿತದ ಮಾತೇಕೆ ಅಮೃತಕೆ ದಾಹವೊಂದಿರಬೇಕು 

ಮಡಿಯಲ್ಲಿ ಮ್ಯಾನುಫಾಕ್ಚರ್ರು!


ಮಡಿಯಲ್ಲಿ ಮ್ಯಾನುಫಾಕ್ಚರ್ರು!
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ನಮಸ್ಕಾರ! ಏನು ಸ್ವಾಮಿ ಬ್ರಾಹ್ಮಣ ಕಳೆ ನಿಮ್ಮ ಮುಖದ ಮೇಲೆ ಪ್ರಜ್ವಲಿಸುತ್ತಾ ಇದೆ?
ಹೋಮ, ಸಹಸ್ರ ನಾಮ, ಅಭಿಷೇಕ, ನೈವೇದ್ಯ ಎಲ್ಲಾ ಈಗ ತಾನೇ ಮಾಡಿರುವ ಹಾಗಿದೆ? 

ಮರೆತೇ ಹೋಯ್ತು! ನಿಮ್ಮ ಉಪಾಕರ್ಮ ಚೆನ್ನಾಗಾಯ್ತೇನು? ಋಗ್ವೇದವೋ ಯಜುರ್ವೆದವೋ?
ಸರಿಗಮ ಕೂಡ ನಿಮ್ಮ ಬಾಯಿಂದ ಹೊರಡಲ್ಲ! ಅದಕ್ಕೆ ನಾನು ಕೇಳಲಿಲ್ಲ ಸಾಮವೇದವೋ?

ಬೇಸರ ಮಾಡಿಕೊಳ್ಳಬೇಡಿ. ನಿಮಗೆ ಹ್ಯಾಗೂ ಯಾವ ವೇದಾನೂ ಬರಲ್ಲಾಂತ ನನಗೂ ಗೊತ್ತು
ಹೊಸ ಜನಿವಾರ ಹಾಕಿ ಕೊಂಡಿರಿ ತಾನೇ? ಮಡಿಯಲ್ಲಿ ಉಪಾಕರ್ಮ ಮಾಡಿದ್ರೀ ಅಂತ ಮಾತು 

ಉಪಾಕರ್ಮದ ಫೋಟೋನೂ, ವೀಡಿಯೋನೂ ಫೇಸ್ ಬುಕ್ಕಿನಲ್ಲಿ ನೋಡಿದೆ; ಚೆನ್ನಾಗಿ ಕಾಣ್ತೀರಿ
ಆಪೋಶನ ತೆಗೆದು ಕೊಳ್ಳುತ್ತಿರುವಾಗಲೂ ಕ್ಯಾಮರಾ ಕಡೆ ಫಿಲಂ ಸ್ಟಾರ್ ತರಹ ಪೋಸ್ ಕೊಟ್ರಿ

ಈ ವರ್ಷದ ಹೊಸತನ ಏನು ಗೊತ್ತಾ? ನಿಮ್ಮ ಯಜ್ಞೋಪವೀತ, ಎಲ್ಲಾ ಪೂಜಾ ಸಾಮಗ್ರಿನ
ಇಂಡಿಯಾಗೆಲ್ಲಾ ಉತ್ಪಾದನೆ ಮಾಡಿ, ರಫ್ತು ಮಾಡಿದ್ದು ಎಲ್ಲಿಂದಾಂತ ಗೊತ್ತಿರಬೇಕಲ್ಲಾ: ಚೈನಾ!

ಕಾಪಿ ಮಯಂ ಜಗತ್

ಕಾಪಿ ಮಯಂ ಜಗತ್
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ಬರೀ ಕಾಪಿ: ಕರೀ ಕಾಪಿ, ಬಿಳೀ ಕಾಪಿ, ಕಂದು ಕಾಪಿ, ಹಳದಿ ಬಣ್ಣದ ಕಾಪಿ
ಸರಿಯಾಗಿ ಕುಡಿಸ್ತಾರೆ, ಕದ್ದೂ, ಕದ್ದೂ ಕುಡಿಸ್ತಾರೆ. ಅವರಲ್ಲ ನೀವೇ ಪಾಪಿ

ಬರೆಯುವಾಗ ಕಾಪೀನೆ ಬರೆಯೋದು; ಜರೆಯೋಕ್ಕೆ ಮಾತ್ರ ಚೂರೂ ಮಿತಿಯಿಲ್ಲ
ಮಾರುವಾಗ ಕಾಪಿ ಮಾಡಿದ್ದೆಲ್ಲಾ ಆರ್ಕಿಮಿಡೀಸನ್ನು ಕಾಪಿ ಮಾಡಿದ ಗತ್ತಿನಲ್ಲೇ 

ಬಚ್ಚಲ ಮನೆಯಿಂದ ಬೆತ್ತಲೆ ಓಡಿಬಂದು ಆರ್ಕಿಮಿಡೀಸಿನ ನಾಟಕ ಮಾಡುತ್ತಾ
ಕಚ್ಚೆ ಲಂಗೋಟಿ ಕೂಡ ಇಲ್ಲದೆ ಇವರ ಕಾಪಿಯ ಪಾಪಕರ್ಮದ ಬೆತ್ತಲು ಗೊತ್ತಾ?

ಸತ್ತು ಸ್ವರ್ಗಕ್ಕೋ, ನರಕಕ್ಕೋ ಹೋದಾಗ ಚಿತ್ರ ಗುಪ್ತರಿಗೂ ಬೊಕಳೆ ಕಲಾವಂತಿಕೆ
ಎತ್ತಿ ಇವರನ್ನು ಯಮ ದರ್ಮರಾಯ ಕುಡಿಯುವ ಎಣ್ಣೆಗೆ ಹಾಕಿದರೂ ನಿಜವಿಲ್ಲವೇಕೆ?

ಪಾಪಿಗಳು ಎಲ್ಲಾ ಬಣ್ಣದಲ್ಲೂ ಹುಟ್ಟುತ್ತಾರೆ: ಕಪ್ಪು, ಬಿಳುಪು, ಕಂದು, ಹಳದಿ, ಕೆಂಪು
ಕೋಪಿಸಿಕೊಂಡು ಅವರ ಮುಖದ ಮೇಲೆ ಉಗಿದರೆ, ರೆಡಿಯಾಗಿರುತ್ತೆ ಕಿಸೆಯಲ್ಲಿ ಕರ್ಚೀಪು  

ಯಾವಾಗಲಾದಾರೂ ನೀವು ಮಾಡಿದ್ದೀರೇನು ಕಾಪಿ? ನಿಜವೇನ್ರೀ ನೀವು ಸುಳ್ಳೇ ಹೇಳಲ್ವಾ?
ಯಾವತ್ತಾದರೂ ಅಪ್ಪಟ ಐಡಿಯಾ ಬಂದಿದೆಯೇನ್ರೀ ನಿಮ್ಮ ತಲೆಗೆ? ನೀವಂದಿದ್ದು ನಂಬಲಾ?

ಆಟಮ್ಮಿನಿಂದ ಆತ್ಮ


ಆಟಮ್ಮಿನಿಂದ ಆತ್ಮ
ಕೆ. ಆರ್. ಎಸ್. ಮೂರ್ತಿ

ಆಟಮ್ಮಿಗೂ ಆತ್ಮವುಂಟೇ?
ಆಟಮ್ಮಿಗೂ ಮತ್ತೊಂದಕ್ಕೂ ನಂಟು ಉಂಟೆ?
ಒಂದಕ್ಕಿನ್ನೊಂದರ ತಿಳಿವುಂಟೇ?
ಪ್ರತಿ ಆಟಮ್ಮಿಗೆ ಈ ತತ್ವದ ಅರಿವುಂಟೇ?

ಆಟಮ್ಮುಗಳು ಒಂದೊರ ಮೇಲೆ ಇನ್ನೊಂದು ಟೂ ಬಿಡುವುದುಂಟೆ?
ಬಿಟ್ಟ ಟೂವನ್ನು ಕೊಡವಿ ಮತ್ತೆ ನಂಟ ಕಟ್ಟುವುವುದೂ ಉಂಟೆ?
ಆಟಮ್ಮುಗಳಲ್ಲಿ ಕೆಟ್ಟ ಆಟಮ್ಮುಗಳೂ ಉಂಟೇನು?
ಆಟಮ್ಮುಗಳು ಚಟ್ಟವೇರಿ ತಮ್ಮಾತ್ಮಗಳಿಗೆ ಬೈ ಬೈ ಹೇಳುವುವೆ?

ಆಟಮ್ಮು ಒಂದಕೆ ಆತ್ಮ ಅರ್ಥವಿಲ್ಲದ ಮಾತು ಎಂದಿರೇನು ನೀವು?
ಎಷ್ಟು ಆಟಮ್ಮುಗಳು ಸೇರಿದರೆ ಒಂದು ಜೀವವಾದೀತು?
ಸರಿಯಪ್ಪಾ! ಈ ಆಟಮ್ಮುಗಳು ಸರಿ ರೀತಿಯಲಿ ಸೇರಿದರೆ?
ಜೀವವೆಲ್ಲಕೂ ಆತ್ಮ ಉಂಟೆ?
ಓಹೋ! ಮಾನವ ಜನ್ಮಕ್ಕೆ ಮಾತ್ರ ಆತ್ಮವುಂಟೇ?
ಮಾನವನ ಮುಂಚೆಯಿದ್ದ ಮಂಗಗಳಿಗೆ ಆತ್ಮವಿಲ್ಲ ಸರಿಯೇ?

Friday, August 3, 2012

ಬೃಹತ್ ದತ್ತ / ಬೃಹದ್ದತ್ತ / ಬ್ರಹ್ಮಾಂಡ ದತ್ತ

ಬೃಹತ್ ದತ್ತ / ಬೃಹದ್ದತ್ತ / ಬ್ರಹ್ಮಾಂಡ ದತ್ತ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ಪ್ರತಿ ಗಳಿಗೆ, ಗಂಟೆಗಳು ಉರುಳುತಿರೆ, ಅನುದಿನ ಬೆಳಿಗ್ಗೆ
ನೆತ್ತಿಯ ಮೇಲೆ ಪ್ರಭಾಕರ ಏರಿ ಬಿಸಿಲು ಬೀರುತಿರುವಾಗ 

ಅಸ್ತಮ ಗತಿಯನು ಮಂದ ಭಾಸ್ಕರನು ಧಾವಿಸುತಿರುವಾಗ
ಸುಸ್ತಾಗಿ ಜಗವೆಲ್ಲಾ ಉಂಡು ಮಲಗಿದರೂ, ನಿಲ್ಲದ ಹಾಗೆ

ದತ್ತ ಮತ್ತೆ ಮತ್ತೆ, ಕೋಟಿಗಟ್ಟಲೆ ಬೈಟುಗಳು ಪೇರುತಿರುವಾಗ
ಸಪ್ತ ಬಿಲ್ಲಿಯನ್ನು ಜೀವಗಳು ಬಿಟ್ಟುಗಳನ್ನು ಹುಟ್ಟಿಸೆ ಬೃಹತ್ತಾಗಿ 

ನಿತ್ಯ ನೀವೆಲ್ಲ ವಟ ವಟ ಮೊಬೈಲಿನಲಿ ಹರಟೆ ಮೇಲೆ ಹರಟೆ
ಒತ್ತುವರಲ್ಲವೇ ಮೊಬೈಲಿನ ಲಿಪಿ ಮಾಲೆಗಳ ಬಿಡುವಿಲ್ಲದಹಾಗೆ

ಪತ್ರಗಳು ಹತ್ತು, ಇಪ್ಪತ್ತು ಒತ್ತಿ ಅಂತರ್ಜಾಲದಲಿ ತೂರಿಸಿದಾಗ
ಕತ್ತೆತ್ತದೆ ಬೆಟ್ಟು ಹತ್ತೂ ಕುಟ್ಟುವರಲ್ಲವೇ ಕಂಪ್ಯೂಟರಿನ ಭರವಾಗಿ

ರಸ್ತೆಯ ಮೇಲೆ ನಡೆದರೂ, ಪಾರ್ಕಿನಲ್ಲಿ ಧೌಡೆತ್ತಿ ಎದುಸಿರುವಾಗ 
ಮಸ್ತಿನಲಿ ಮರ್ಸಿಡೀಸು ಕಾರಿನಲ್ಲಿ ಝುಮ್ಮಗೆ ಹೋಗುತಿರುವಾಗ 

ಇತ್ತ ಮನೆಯಲ್ಲೇ ಇರಲಿ, ಅತ್ತ ಊರೆಲ್ಲಾ ಅಲೆಯುತಿರಲಿ ತಂತಾನಾಗಿ
ಹತ್ತಿ ವಿದ್ಯುತ್ ಉರಿಯುತಿರೆ ಮನೆಯೊಳಗೆ ಫ್ರಿಜ್ಜು ತಂಗಳಿನ ಆಗಾರವಾಗಿ

ಸುತ್ತಿ, ಸುತ್ತುತ್ತಾ ಇರುವ ಮನೆಯ ವಿದ್ಯುತ್ ಮೀಟರು ದತ್ತ ದಾತಾರವಾಗಿ 
ಎತ್ತೆತ್ತ ಓಡಿದರೂ ಕಾರು ನಿಮ್ಮ ಪತ್ತೆಯೆಲ್ಲವನ್ನೂ ದತ್ತ ರೂಪದಲಿ ಕೂಡಿದಾಗ

ಗೊತ್ತೇ ನಿಮಗೆ ಸಾವಿರಾರು ಕೋಟಿ ಬಿಟ್ಟು, ಬೈಟುಗಳ ಹುಟ್ಟಿಸಿದ್ದೆಲ್ಲಾ ಒಟ್ಟಾಗಿ
ಬರ್ತಿ ಮಾಡುವುದು ದತ್ತ ಕೇಂದ್ರದ ಬೃಹತ್ ಬಂಗಲೆಗಳನ್ನೇ ಆತುರಾತುರವಾಗಿ 

ದತ್ತ ಈ ಪಾಟಿ ಬೆಳೆಯಿತಿರೆ ಇಂತಹ ದತ್ತ ಸಾಮ್ರಾಜ್ಯಕ್ಕೆ ಹೆಸರು ಹೊಸದಾಗಿ 
ಇತ್ತಿಹೆವು 'ಬೃಹತ್ ದತ್ತ', 'ಬೃಹದ್ದತ್ತ'; ಬ್ರಹ್ಮಾಂಡ ದತ್ತ' ಅನ್ನಬೇಕೇನು ಸರಿಯಾಗಿ? 

Thursday, August 2, 2012

ಪ್ರಶ್ನೆಯೊಂದೇ ಸತ್ಯ, ನಿತ್ಯ


ಪ್ರಶ್ನೆಯೊಂದೇ ಸತ್ಯ, ನಿತ್ಯ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ಸುತ್ತಿ, ಸುತ್ತಿ, ಸುತ್ತಿ, ಸುಸ್ತಿಲ್ಲವೇನೆ ಪುಟಾಣಿ ಎಲಕ್ಟ್ರಾಣಿ?
ಸುತ್ತುವಾಗ ಉರುಳು ಸೇವೆ, ಒಮ್ಮೊಮ್ಮೆ ಪಲ್ಟಿ ಸುತ್ರಾಣಿ

ಹತ್ತಿರ ಬಾರೋ ಪ್ರೋಟಾಣಯ್ಯ; ವಿದ್ಯುತ್ ಗುಣ ಪೂರ್ಣ
ಹತ್ತಕ್ಕೂ ಹೆಚ್ಚು ಬಿಲಿಯನ್ನು ನನ್ನಾ ನಿನ್ನಾ ವಿದ್ಯುತ್ ಪ್ರಾಣ

ಸತ್ತವಿದ್ಯುತ್ ಗುಣ ಷಂಡ ನ್ಯೂತ್ರಾನಯ್ಯ ಅತೀ ನಿತ್ರಾಣ
ಇತ್ತ ಅತೀ ಬೇಸರದ ಪ್ರಸಂಗ ಕಣೇ ಚಿನ್ನಾರಿ ಬರೀ ಭಣಭಣ

ನ್ಯೂತ್ರಿಣೋ ಹಾವಳಿ ಬಲು ಆಗಿದೆ; ತೂಕವೂ ಇಲ್ಲ ವಿದ್ಯುತ್ತಿhಲ್ಲ
ಕತ್ತೆತ್ತಿ, ಕಣ್ಬಿಟ್ಟು ನೋಡುವುದರೊಳಗೆಯೇ ಪರಾರಿ ಮಾಡ್ತಾನಲ್ಲ

ಮತ್ತೆ, ಮತ್ತೆ ಈ ಮಾನವರೂ ತಮಗೆ ಎಲ್ಲಾ ಗೊತ್ತು ಅಂತಾರಲ್ಲ 
ಸತ್ಯ ಏನು? ಜಗತ್ತೆಲ್ಲಾ ಹೆತ್ತದ್ದು 'ದೇವರು' ಅಂದ್ರೆ ಅರ್ಥ ಆಗಿಲ್ಲ

ಎಂಥದೋ ಭ್ರಮೆಯ ಲೋಕದಲ್ಲಿ ಇದ್ದಾರೆ ಕಣೆ; ಅಂಥಾ ದೇವರಿಲ್ಲ
ಚಿಂತೆ ಮಾಡುವ ವರ ಚೂರು ಮಾತ್ರ ಸಿಕ್ಕಿದೆ ಅವರಿಗೆ ಬೇರೆಯೇನಿಲ್ಲ

ಇತ್ತ ನಾನೂ, ನೀನು ಹತ್ತಿರದಲ್ಲೇ ವಿದ್ಯುತ್ ಪ್ರಣಯದಲ್ಲಿ ಇದ್ದೀವಲ್ಲಾ 
ಇಂಥಾ ಬಂಧನ ನನಗೆ - ನಿನಗೆ ಒಬ್ಬರಿಗೊಬ್ಬರು ಗೊತ್ತು ತಿಳೀತಲ್ಲ?

ಸತ್ತ ವಿದ್ಯುತ್ ನಿತ್ರಾಣಿ ನ್ಯೂಟ್ರಾಣಯ್ಯನಿಗೆ ನೀನೂ ಗೊತ್ತಿರಲಿಕ್ಕಿಲ್ಲ
ಎತ್ತೆತ್ತಲೂ ಅಲೆಯುವ ನ್ಯೂತ್ರಿನೋಗಂತೂ ಯಾರ ಆಸ್ಥೆಯೂ ಇರಲಿಕ್ಕಿಲ್ಲ

ಕತ್ತಲಲ್ಲಿ ಮಿನುಗುವ ಮಿಣುಕು ಹುಳ ಫೋಟಾನ್ ನಮಾಚಾರ ತರ್ತಾನಲ್ಲ
ತರ್ತಾನೇನು ಜಗತ್ತೆಲ್ಲಾ ಹೆತ್ತದ್ದರ ಬಗ್ಗೆ? ಮಿಲಿಯನ್ನು ಮೈಲಿಗೆ ಸುಸ್ತಾಗ್ತನಲ್ಲ

ಕತ್ತಲು ಭೂತ ರಾಯ ಕಬಳಿಸುವ ಫೋಟಾನ್ ಗುಳಿಗೆ ಗುಳುಕ್ ಮಾಡ್ತಾನಲ್ಲ
ಎತ್ತಲೆತ್ತಲೋ ಜಗತ್ತಿನ ಮೂಲೆ ಮೂಲೆಯೆಲ್ಲ ಒಂದಕ್ಕೊಂದು ಗೊತ್ತೇ ಇಲ್ಲಾ!

ಇತ್ತದಕ್ಕೆ ಅತ್ತದು ಇದೆಯೆಂದೂ ಪತ್ತೆ ಇಲ್ಲ; ಎಲ್ಲಕ್ಕೂ ಎಲ್ಲವೂ ಸಂಬಂಧವಿಲ್ಲ
ಇಂಥದು ಹೇಗೆ ಯಾವಾಗ ಬಂತು? ಇದೇಕೆ ಬಂತು? "ಅಂತ್ಯ"ಕ್ಕೂ ಅರ್ಥವೇ ಇಲ್ಲ

Wednesday, August 1, 2012

ಇಲ್ಲ ಅಂದರೆ: ಖಡಾ ಖಂಡಿತವಾಗಿ "ಇಲ್ಲಾ"


ಇಲ್ಲ ಅಂದರೆ: ಖಡಾ ಖಂಡಿತವಾಗಿ "ಇಲ್ಲಾ"
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ನಾನಿಲ್ಲ; ಇಲ್ಲೂ, ಅಲ್ಲೂ, ನಿನ್ನ ಮನಕೆ ಎಟುಕುವ ಎಲ್ಲೆಲ್ಲೂ ಇಲ್ಲವೇ ಇಲ್ಲ
ನಾನಲ್ಲ; ಮುನಿಜನ ಮಂಡಿಸಿದವ ಅಲ್ಲ; ಬರೀ ತಪ್ಪು ಋಷಿಗಳು ಬರೆದದ್ದೆಲ್ಲಾ

ಸಿಂಹದ ತಲೆಯಂತೂ ನನಗಿಲ್ಲ; ಬಾಲವಿಲ್ಲ, ಇಲಿಯಲ್ಲ, ಆನೆಯ ಸೊಂಡಿಲಿಲ್ಲ
ಅಹಂ ಬ್ರಹ್ಮ ಅಂದ ಬ್ರಾಹ್ಮಣ ವಟುವಿಗೇನೂ, ಕಿಂಚಿತ್ತೂ ನನ್ನ ಬಗ್ಗೆ ಗೊತ್ತಿಲ್ಲ

ನಾಲ್ಕು ತಲೆ ನನಗಿಲ್ಲ; ತಿಳಿದುಕೋ ಇದು ನನ್ನ ಗುಟ್ಟು: ನನಗೆ ತಲೆಯೇ ಇಲ್ಲ
ಕಾಲೂ, ಕೈಯೂ, ಹೊಟ್ಟೆಯೂ, ನಯನಗಳೂ, ಕಿವಿ, ಮೂಗುಗಳೂ ನನಗಿಲ್ಲ

ನನಗೆ ಕನ್ನಡ ಬರುವುದಿಲ್ಲ; ಸಂಸ್ಕೃತದ ಗಂಧವಂತೂ ಇಲ್ಲ; ನನಗೆ ಹೆಸರಿಲ್ಲ
ಕೊನೆಗಾಲದಲ್ಲಿ ಸುಮ್ಮನೆ ನನ್ನ ಕೂಗಿ ಕರೆಯಲೇ ಬೇಡ; ಸತ್ತ ಮೇಲೆ ನೀನಿಲ್ಲ

ಅತ್ಮವೆಂಬುದಿಲ್ಲ; ಯೋಗ, ಯಾಗ, ತ್ಯಾಗ ಇದಕೆಲ್ಲಾ ನಾನಿನಗೆ ದೊರಕುವುದಿಲ್ಲ
ಔತಣ, ಸಮಾರಾಧನೆ, ದಾನ, ಭಿಕ್ಷೆ ಮಾಡಿದರೆ ಮಾಡಿದರೂ ನನಗೆ ಸೇರುವುದಿಲ್ಲ

ಭಜನೆ, ಪಾರಾಯಣ, ಮಣಮಣ ಮಂತ್ರ ಇವೆಲ್ಲಾ ನನಗೆ ಕೇಳಲು ಕಿವಿಗಳೇ ಇಲ್ಲ
ಕಾಂಚನ, ಮಿಣ ಮಿಣ ಮಣಿಗಳೂ, ವಜ್ರ ವೈಡೂರ್ಯದ ಕಿರೀಟಕೆ ಶಿರವೇ ಇಲ್ಲ

ಇದೆಲ್ಲಾ ನಿನ್ನ ತಲೆಗೆ ತಟ್ಟದಿದ್ದರೆ, ತಿಳಿದುಕೋ ನಿನಗೆ ಅಲ್ಪ, ಸ್ವಲ್ಪವೂ ತಲೆಯೇ ಇಲ್ಲ
ಬಿಡಲ್ಲಾ ಇನ್ನು ಮೇಲಾದರೂ ಮೂಢ ನಂಬಿಕೆಯೆಂದರೆ ಈ ಕವಿತೆಗೆ ಪ್ರಯೋಜನವಿಲ್ಲ