ಪ್ರಶ್ನೆಯೊಂದೇ ಸತ್ಯ, ನಿತ್ಯ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ
ಸುತ್ತುವಾಗ ಉರುಳು ಸೇವೆ, ಒಮ್ಮೊಮ್ಮೆ ಪಲ್ಟಿ ಸುತ್ರಾಣಿ
ಹತ್ತಿರ ಬಾರೋ ಪ್ರೋಟಾಣಯ್ಯ; ವಿದ್ಯುತ್ ಗುಣ ಪೂರ್ಣ
ಹತ್ತಕ್ಕೂ ಹೆಚ್ಚು ಬಿಲಿಯನ್ನು ನನ್ನಾ ನಿನ್ನಾ ವಿದ್ಯುತ್ ಪ್ರಾಣ
ಸತ್ತವಿದ್ಯುತ್ ಗುಣ ಷಂಡ ನ್ಯೂತ್ರಾನಯ್ಯ ಅತೀ ನಿತ್ರಾಣ
ಇತ್ತ ಅತೀ ಬೇಸರದ ಪ್ರಸಂಗ ಕಣೇ ಚಿನ್ನಾರಿ ಬರೀ ಭಣಭಣ
ನ್ಯೂತ್ರಿಣೋ ಹಾವಳಿ ಬಲು ಆಗಿದೆ; ತೂಕವೂ ಇಲ್ಲ ವಿದ್ಯುತ್ತಿhಲ್ಲ
ಕತ್ತೆತ್ತಿ, ಕಣ್ಬಿಟ್ಟು ನೋಡುವುದರೊಳಗೆಯೇ ಪರಾರಿ ಮಾಡ್ತಾನಲ್ಲ
ಮತ್ತೆ, ಮತ್ತೆ ಈ ಮಾನವರೂ ತಮಗೆ ಎಲ್ಲಾ ಗೊತ್ತು ಅಂತಾರಲ್ಲ
ಸತ್ಯ ಏನು? ಜಗತ್ತೆಲ್ಲಾ ಹೆತ್ತದ್ದು 'ದೇವರು' ಅಂದ್ರೆ ಅರ್ಥ ಆಗಿಲ್ಲ
ಎಂಥದೋ ಭ್ರಮೆಯ ಲೋಕದಲ್ಲಿ ಇದ್ದಾರೆ ಕಣೆ; ಅಂಥಾ ದೇವರಿಲ್ಲ
ಚಿಂತೆ ಮಾಡುವ ವರ ಚೂರು ಮಾತ್ರ ಸಿಕ್ಕಿದೆ ಅವರಿಗೆ ಬೇರೆಯೇನಿಲ್ಲ
ಇತ್ತ ನಾನೂ, ನೀನು ಹತ್ತಿರದಲ್ಲೇ ವಿದ್ಯುತ್ ಪ್ರಣಯದಲ್ಲಿ ಇದ್ದೀವಲ್ಲಾ
ಇಂಥಾ ಬಂಧನ ನನಗೆ - ನಿನಗೆ ಒಬ್ಬರಿಗೊಬ್ಬರು ಗೊತ್ತು ತಿಳೀತಲ್ಲ?
ಸತ್ತ ವಿದ್ಯುತ್ ನಿತ್ರಾಣಿ ನ್ಯೂಟ್ರಾಣಯ್ಯನಿಗೆ ನೀನೂ ಗೊತ್ತಿರಲಿಕ್ಕಿಲ್ಲ
ಎತ್ತೆತ್ತಲೂ ಅಲೆಯುವ ನ್ಯೂತ್ರಿನೋಗಂತೂ ಯಾರ ಆಸ್ಥೆಯೂ ಇರಲಿಕ್ಕಿಲ್ಲ
ಕತ್ತಲಲ್ಲಿ ಮಿನುಗುವ ಮಿಣುಕು ಹುಳ ಫೋಟಾನ್ ನಮಾಚಾರ ತರ್ತಾನಲ್ಲ
ತರ್ತಾನೇನು ಜಗತ್ತೆಲ್ಲಾ ಹೆತ್ತದ್ದರ ಬಗ್ಗೆ? ಮಿಲಿಯನ್ನು ಮೈಲಿಗೆ ಸುಸ್ತಾಗ್ತನಲ್ಲ
ಕತ್ತಲು ಭೂತ ರಾಯ ಕಬಳಿಸುವ ಫೋಟಾನ್ ಗುಳಿಗೆ ಗುಳುಕ್ ಮಾಡ್ತಾನಲ್ಲ
ಎತ್ತಲೆತ್ತಲೋ ಜಗತ್ತಿನ ಮೂಲೆ ಮೂಲೆಯೆಲ್ಲ ಒಂದಕ್ಕೊಂದು ಗೊತ್ತೇ ಇಲ್ಲಾ!
ಇತ್ತದಕ್ಕೆ ಅತ್ತದು ಇದೆಯೆಂದೂ ಪತ್ತೆ ಇಲ್ಲ; ಎಲ್ಲಕ್ಕೂ ಎಲ್ಲವೂ ಸಂಬಂಧವಿಲ್ಲ
ಇಂಥದು ಹೇಗೆ ಯಾವಾಗ ಬಂತು? ಇದೇಕೆ ಬಂತು? "ಅಂತ್ಯ"ಕ್ಕೂ ಅರ್ಥವೇ ಇಲ್ಲ
No comments:
Post a Comment