Wednesday, August 1, 2012

ಇಲ್ಲ ಅಂದರೆ: ಖಡಾ ಖಂಡಿತವಾಗಿ "ಇಲ್ಲಾ"


ಇಲ್ಲ ಅಂದರೆ: ಖಡಾ ಖಂಡಿತವಾಗಿ "ಇಲ್ಲಾ"
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ನಾನಿಲ್ಲ; ಇಲ್ಲೂ, ಅಲ್ಲೂ, ನಿನ್ನ ಮನಕೆ ಎಟುಕುವ ಎಲ್ಲೆಲ್ಲೂ ಇಲ್ಲವೇ ಇಲ್ಲ
ನಾನಲ್ಲ; ಮುನಿಜನ ಮಂಡಿಸಿದವ ಅಲ್ಲ; ಬರೀ ತಪ್ಪು ಋಷಿಗಳು ಬರೆದದ್ದೆಲ್ಲಾ

ಸಿಂಹದ ತಲೆಯಂತೂ ನನಗಿಲ್ಲ; ಬಾಲವಿಲ್ಲ, ಇಲಿಯಲ್ಲ, ಆನೆಯ ಸೊಂಡಿಲಿಲ್ಲ
ಅಹಂ ಬ್ರಹ್ಮ ಅಂದ ಬ್ರಾಹ್ಮಣ ವಟುವಿಗೇನೂ, ಕಿಂಚಿತ್ತೂ ನನ್ನ ಬಗ್ಗೆ ಗೊತ್ತಿಲ್ಲ

ನಾಲ್ಕು ತಲೆ ನನಗಿಲ್ಲ; ತಿಳಿದುಕೋ ಇದು ನನ್ನ ಗುಟ್ಟು: ನನಗೆ ತಲೆಯೇ ಇಲ್ಲ
ಕಾಲೂ, ಕೈಯೂ, ಹೊಟ್ಟೆಯೂ, ನಯನಗಳೂ, ಕಿವಿ, ಮೂಗುಗಳೂ ನನಗಿಲ್ಲ

ನನಗೆ ಕನ್ನಡ ಬರುವುದಿಲ್ಲ; ಸಂಸ್ಕೃತದ ಗಂಧವಂತೂ ಇಲ್ಲ; ನನಗೆ ಹೆಸರಿಲ್ಲ
ಕೊನೆಗಾಲದಲ್ಲಿ ಸುಮ್ಮನೆ ನನ್ನ ಕೂಗಿ ಕರೆಯಲೇ ಬೇಡ; ಸತ್ತ ಮೇಲೆ ನೀನಿಲ್ಲ

ಅತ್ಮವೆಂಬುದಿಲ್ಲ; ಯೋಗ, ಯಾಗ, ತ್ಯಾಗ ಇದಕೆಲ್ಲಾ ನಾನಿನಗೆ ದೊರಕುವುದಿಲ್ಲ
ಔತಣ, ಸಮಾರಾಧನೆ, ದಾನ, ಭಿಕ್ಷೆ ಮಾಡಿದರೆ ಮಾಡಿದರೂ ನನಗೆ ಸೇರುವುದಿಲ್ಲ

ಭಜನೆ, ಪಾರಾಯಣ, ಮಣಮಣ ಮಂತ್ರ ಇವೆಲ್ಲಾ ನನಗೆ ಕೇಳಲು ಕಿವಿಗಳೇ ಇಲ್ಲ
ಕಾಂಚನ, ಮಿಣ ಮಿಣ ಮಣಿಗಳೂ, ವಜ್ರ ವೈಡೂರ್ಯದ ಕಿರೀಟಕೆ ಶಿರವೇ ಇಲ್ಲ

ಇದೆಲ್ಲಾ ನಿನ್ನ ತಲೆಗೆ ತಟ್ಟದಿದ್ದರೆ, ತಿಳಿದುಕೋ ನಿನಗೆ ಅಲ್ಪ, ಸ್ವಲ್ಪವೂ ತಲೆಯೇ ಇಲ್ಲ
ಬಿಡಲ್ಲಾ ಇನ್ನು ಮೇಲಾದರೂ ಮೂಢ ನಂಬಿಕೆಯೆಂದರೆ ಈ ಕವಿತೆಗೆ ಪ್ರಯೋಜನವಿಲ್ಲ

1 comment:

  1. Nice to read and very ryhthamic and meaningfull. Very touching for the all the persons who does not believe in rituals.....
    I rarely read kannada script... I could enjoy
    it fully.... Cheers ... Nagesh

    ReplyDelete