Saturday, June 30, 2012

ನೀವೇನಾದರೂ?..... ಯಾರಿಗಾದರೂ?


ನೀವೇನಾದರೂ?..... ಯಾರಿಗಾದರೂ?
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ಅವರು ಇವರಿಗೆ; ಇವರು ಮತ್ತೆ ಅವರಿಗೆ
ಕೆಲವರು ಬಾಗಿಲು ಮುಚ್ಚಿ, ಗುಟ್ಟು ಗುಟ್ಟಾಗಿ

ಪ್ರಿಯ ಪ್ರೇಯಸಿಗೆ; ಪ್ರೇಯಸಿಯು ಇನ್ಯಾರೋ ಒಬ್ಬನಿಗೆ
ಪ್ರಿಯನಿಗೆ ಮಾತ್ರ ಗೊತ್ತಿಲ್ಲ, ಏಕೆಂದರೆ ಗುಟ್ಟು ಗುಟ್ಟಾಗಿ

ಪಕ್ಕದ ಮನೆಯವರೋ, ಅಕ್ಕ ಪಕ್ಕದ ಬೀದಿಯವರೋ
ಸಿಕ್ಕವರಿಗೆಲ್ಲಾ ಆಗಿಹೋದರೆ ನಡೆದು ಹೋಗಲಿ, ಗುಟ್ಟಾಗಿ

ಕೆಲವರಂತೂ ತಮ್ಮ ಬಾಸ್ಗೇ; ಮತ್ತೆ ಕೆಲವರು ಪುಡಾರಿಗೆ
ಕೆಲಸವೇನಾದರೂ ಆಗಬೇಕಾದರೆ, ಕೊಡುವರು ಗುಟ್ಟಾಗಿ

ಕೊಟ್ಟವರಿಗೂ ಕೆಲಸವಾಗಿ, ಇಸಕೊಂಡವರಿಗೂ ಸಿಕ್ಕಿತಲ್ಲ!
ಯಾರಿಗೂ ಹೇಳ ಬೇಡಿ, ನಮ್ಮಲೇ ಇರಲಿ ಗುಟ್ಟಾಗಿ

ಹಚ್ಚಿ, ಚೆನ್ನಾಗಿ ಹಚ್ಚಿ; ನಯವಾಗಿ ಹಚ್ಚಿ; ನೀವಿ ಹೆಚ್ಚಾಗಿ
ನೀವಿಸಿ ಕೊಂಡವರಿಗೂ ಹಾಯಿ - ಹಾಯಿ; ನೀವಿದವರಿಗೂ

ಬೆಣ್ಣೆಯ ಬೆಲೆ ತಗ್ಗಿ ಹೋಗಿದೆ; ಕೆ. ಜಿ. ಅಲ್ಲ ಮಣಗಟ್ಟಲೆ
ಎಲ್ಲಿ ಬೇಕಾದರೂ, ಹೇಗಾದರೂ, ಯಾವಾಗಲಾದರೂ

ಬೆಣ್ಣೆ ಕದ್ದ ಕಳ್ಳನೊಬ್ಬ ಊರು ಕೇರಿಯ ಹುಡುಗಿಯರೆಗೆಲ್ಲ
ಸುಖವಾಗಿರಿಸಿದನೆಂದೂ ಯಾರೋ ಋಷಿಗಳು ಬರೆದದ್ದು 

ಬರೆದವರ ಪಾಪ ಪುಣ್ಯಗಳು ನಮಗೆ ಮಾತ್ರ ಬೇಡಪ್ಪ
ಕವಿ ಕಲ್ಪನೆಯೂ? ಕಲಿಯುಗದ ಅಲ್ಪ ನನ್ನ ಅನಿಸಿಕೆಯೂ?

ನಿಮಗೇನಾದರೂ ಗೊತ್ತೇ? ನಿಮಗೆ ನೀವಿದ ಅನುಬಂಧವಿದೆಯೇ
ನೀವಿಸಿಕೊಂಡಾಗಿನ ಸವಿ ನೋವಿನ ನೆನಪೆನಾದರೂ ಇದೆಯೇ? 

ನಾಳೆ, ನಾಳೆ, ನಾಳೆಯೆಂದು .......


ನಾಳೆ, ನಾಳೆ, ನಾಳೆಯೆಂದು .......

ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ನಾಳೆ ಬರಲಿ, ಎಲ್ಲಾ ಇರಲಿ, ನಾಳೆಗೆಂದು ಕಾದೆ; ನಾಳೆಗಾಗಿ ಎದುರು ನೋಡಿದೆ
ಬಾಳಿನಲ್ಲಿ ನಾಳೆಯೇ ಹಿರಿದೆಂದು, ಮೆರೆವೆ ಮುಂದೆ ಎಂದು, ಇರುವುದೆಲ್ಲಾ ಉಳಿಸಿದೆ

ಇಂದು ಬಂದು, ನನಗೆಂದೇ ಏನೇನೋ ತಂದು, ಕಾಯುತ್ತಿತ್ತು ಅತಿಶಯದ ಕಾತರದಿ
ಮುಂದು, ಮುಂದು ಎಂದುಕೊಂಡು, ಸಂದದೆಲ್ಲಾ ನನ್ನದಲ್ಲವೆಂದು ಕಾಲ ಕಳೆಯುತಿದ್ದೆ

ಜಾರಿ, ಜಾರಿ, ವಾರ, ವಾರ ಸರಿಯುತ್ತಿತ್ತು ತ್ವರೆಯಲಿ; ಈಟೂ, ತುಸೂ ಮೆರೆಯದಾದೆ
ಬಾರಿ, ಬಾರಿ ಕೈಹಿಡಿದು ಎಳೆದರೂ, ಇಂದೇ, ಈಗಲೇ ಬದುಕಬೇಕೆಂದು ತಿಳಿಯದಾದೆ

ವರುಷಗಳೇ ಓಡಿ ಹೋಯಿತೆಂದು, ಹೋದದೆಲ್ಲ ಬಾರದೆಂದು ಹೊಳೆಯುವ ಕಾಲ ಬಂದಿದೆ
ಬರಹವಿಲ್ಲದಂಥ ಖಾಲಿ ಹಾಳೆ ಮಾತ್ರ ರಾಶಿ, ರಾಶಿ ಕಡತವಾಗಿ ಸೇರಿ ಪೇರುತ್ತಾ ಬೆಳೆದಿದೆ

ಕಳೆದ ದಶಕ, ವರುಷ, ವಾರ, ಹೋರ ಕಸದ ಬುಟ್ಟಿ ಈಗ; ನಾಳೆಗಳು ಬಹಳವಿಲ್ಲದಾಗಿದೆ
ನಾಳೆಗಿಂತ ಇಂದೇ ಸತ್ಯ; ಜೀವಕೆ ಎಟುಕದ ನಾಳೆ ಸುಳ್ಳು; ಈಗಲೇ ಕುಣಿವ ಕಾಲ ಬಂದಿದೆ

Friday, June 29, 2012

ತಾನಲ್ಲ ದಾನಿ ಎಂಬ ಮನದವನೇ ಜ್ಞಾನಿ


ತಾನಲ್ಲ ದಾನಿ ಎಂಬ ಮನದವನೇ ಜ್ಞಾನಿ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ಇಂದೊಂದು ಬಿಂದು, ನಾಳೆ ಮತ್ತೊಂದು ಹನಿ, ಒಂದೊಂದಾಗಿಯೇ ಬಿದ್ದು
ಉಧ್ಧರಣೆಯಲಿ ಶುಧ್ಧೋದಕವಾಯ್ತು; ಬಾಯಿಗೆ ಬಿದ್ದು ದಾಹ ಅಡಗಿಸೀತು

ಅಂಧರಿಗೆ ಅನುವಾಗಿ, ದರ್ಶನದ ಸಂಪತ್ತಿತ್ತು, ನೊಂದ ಜೀವವ ಸಂತೈಸೀತು
ಒಂದು, ಇನ್ನೊಂದು, ಮಗದೊಂದು, ಎಂದೆಲ್ಲಾ ಸಂದರೆ ಸಾಗರವೇ ಆದೀತು

ತನ್ನದಿತ್ತವನೇ ತಂದೆ; ತನ್ನದಲ್ಲವಿದು ಎಂದು ಅರಿತವನೇ ಕೈನೀಡಿದ ದಾನಿ
ತಾನೇ ಇತ್ತರೂ, ತನ್ನದೆಲ್ಲವನೂ ಕೊಟ್ಟರೂ, ಆಹಂಕಾರ ಕೊಡವಿದವನೇ ಜ್ಞಾನಿ

ಕೊಟ್ಟು ಬಿಡು, ಕಟ್ಟಿ, ಕಟ್ಟಿ ಅಟ್ಟದಲಿ ಅಡಗಿಸಿ ಇಟ್ಟಿದ್ದ ಸೊತ್ತೆಲ್ಲವನೂ ಬಿಟ್ಟು ಬಿಡು
ಕೊಟ್ಟೆ, ಇಷ್ಟು ಕೊಟ್ಟೆ, ಅಷ್ಟೂ ಕೊಟ್ಟವನು ನಾನು ಎಂಬುದೆಲ್ಲವನೂ ಬಿಸುಟು ಬಿಡು

Thursday, June 28, 2012

ಯೂರೋಪಿನ ಗಬ್ಬು ನಾತದ ಹಾವಳಿ


ಯೂರೋಪಿನ ಗಬ್ಬು ನಾತದ ಹಾವಳಿ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ಬರಲಿದೆ ಆಹಾಹಾ, ಬೀಸುತ ಬರಲಿದೆ ಯೋರೋಜೊನಿನ ಸುಂಟರ ಗಾಳಿ
ತರಲಿದೆ ಭರ ನಮ್ಮೆಲ್ಲರಿಗೂ ಯೂರೋ ಆರ್ಥಿಕ ಕಂಪದ ತ್ಸುನಾಮಿ ಹಾವಳಿ

ಗ್ರೀಕರ ಮೇಧಾವಿ ವೇದಾಂತಿಗಳು ಸಮಾಧಿಯಲಿ ಬೆಚ್ಚೆದ್ದು ತಲೆ ಹೊತ್ತಿದ್ದಾರೆ
ಆರ್ಕಿಮಿಡೀಸು, ಸೋಕ್ರಟೀಸು, ಪ್ಲೇಟೋ, ಹೋಮರು ಮಂಡೆ ಬಿಸಿಯಾಗಿದ್ದಾರೆ 

ಅತ್ತ ಸ್ಪೇನೂ ತಮ್ಮ ಸ್ವತ್ತನ್ನೆಲಾ ಪೋಲು ಮಾಡಿಹರೋ ಎಂಬಂತೆ ಕಂಬನಿಯಲ್ಲಿ
ಅತ್ತಿತ್ತಗಲದೆ ನಿತ್ಯ ಮಹೋತ್ಸವ ಯೂರೋಪಿನಲ್ಲಿ ಮಾಡದೆ ಲಕುಮಿ ಜಾಗ ಖಾಲಿ

ಯೂರೋಪಿನ ಕಟಾರೋಪು ತುಸ್ಸೆಂದು ಸರ್ವರ ಗರ್ವದ ಗಾಳಿಯಾಗಲೇ ಸೋರುತಿದೆ
ಹೊರನಾಡಿಗೆ ದುರ್ನಾತ ಗಬ್ಬೆಂದು ಹರಡಿ, ಅಮೇರಿಕಾ ಕೂಡ ಮೂಗು ಮುಚ್ಚಿ ಕೊಂಡಿದೆ

ಚಿನಕು ಮಹಾರಾಷ್ಟ್ರ, ಮಿಕ್ಕ ಸಣ್ಣ ಕಣ್ಣಿನ ಕೊರಿಯಾ, ಜಪಾನಿಗೂ ಹಣ ಆವಿಯಾಗಿ ಆಗಲಿದೆ
ಮಂಕು ಮತಿಯನು ಬಿಗುಮಾನವಿಲ್ಲದೆ ಭಾರತೀಯರು ಹುಷಾರು ಆದರೆ ಬದುಕ ಬಹುದೇ?

Friday, June 22, 2012

ನನ್ನದಾವುದೂ ಅಲ್ಲ


ನನ್ನದಾವುದೂ ಅಲ್ಲ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ಬರಹದಲಿ ಎನ್ನದಾವುದೂ ತುಸೂ ಕುರುಹಿಲ್ಲ;
ಸರಾಗದ ಮಾತಿನಲಿ, ಹಾಡುವ ರಾಗದಲಿ ನನ್ನತೆಯಿಲ್ಲ
ಗುನುಗುನಿಸುವ ಗಾನದಲಿ, ಗೆಜ್ಜೆಯ ತಾಳದಲಿ ನನ್ನೆದೆಯಿಲ್ಲ; 

ಭವ ಸಮುದ್ರದ ಆಳದಲೆಲ್ಲೋ, ಎಂತೋ
ಭಾವ ಮಥನವಂತೂ ಆಗಿರಬಹುದೇನೋ,
ಅದಾವ ರೀತಿಯ ಅರಿವಿಲ್ಲದವ ಹುಲು ಮಾನವ ನಾನು

ಗಂಗಮ್ಮನಂತೆ ಕಾವ್ಯ ಸುಂದರಿಯು ಧಾವಿಸಿ
ತನು, ಮನ ಎನ್ನದೆಲ್ಲವನೂ ತನ್ನದಾಗಿಸಿ
ಹರಿದು ಭರ ಭರದಿ ನಿಮ್ಮನೆಲ್ಲಾ ಸೇರುವಳು

ರಸಿಕತೆಯ ಕುಣಿಸಿ ತಣಿಸುವ ಚೆಲುವೆ
ಪುಟ್ಟಿದವಳೆಲ್ಲೋ ಅದಾವುದೂ ಹೇಳುವಳಲ್ಲ
ಅವಳ ಧಾರೆಯ ದಾರಿಯಲಿ ನಾನಿರುವುದಂತೂ
ನನ್ನ, ನನ್ನತೆಯ, ಭಿನ್ನತೆಯಲಿ ಪುಳಕಿಸುವುದಂತೂ
ಹುಟ್ಟಿನಿಂದಲೇ ಮುತ್ತು ಕೊಟ್ಟು ಕೊಟ್ಟ ದಿಟ ಪ್ರಸಾದ

ನನ್ನತೆ


ನನ್ನತೆ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ನನ್ನ ನಾ ತುಸು ತಿಳಿಕೊಂಡೆ; ನಾನೆಂಬುದನೇ ಕಳಕೊಂಡೆ
ನನ್ನದೇನೂ ಇದ್ದಿಲ್ಲ, ಇಲ್ಲ, ಇರುವುದಿಲ್ಲವೆಂಬುದ ಅರಿತುಕೊಂಡೆ

ಚಿನ್ನವನು ಪುಟಕ್ಕೆ ಅರ್ಪಿಸಿದಂತೆ ಕಷ್ಟದ ಕಾಷ್ಟದಲಿ ಬೆಂದುಕೊಂಡೆ
ಖಿನ್ನ ಮನವಾದಾಗ ಸ್ವಭಾವವನು ಘನವಾಗಿಸಿ ಸಂಬಾಳಿಸಿಕೊಂಡೆ

ಕಣ್ಣು ನೀರಿನ ಚಿಲುಮೆಯಾದಾಗ ಗಳಗಳನೆ ಅಳುತ್ತ ಹಗುರಗೊಂಡೆ
ತನು ಜಡತೆಯಿಂದ ಬಡವಾಗಿದ್ದಾಗ ಧೃಡತೆಯಿಂದ ಬಲತುಂಬಿಕೊಂಡೆ

ಇನ್ನೂ ಏನೇನೋ ಕಾದಿದ್ದರೂ, ಬರುವುದೆಲ್ಲವನೂ ಬರಲೆಂದುಕೊಂಡೆ
ಏನೂ ಅಗಲಿಸದ, ಏತಕ್ಕೂ ಹೆದರದ ವಿಭಿನ್ನ ಜೀವಿ ನಾನಾಗುವೆ ಮುಂದೆ

Sunday, June 10, 2012

ಇದುವೇ ಹನುಮನ ಭಜನೆ


ಇದುವೇ ಹನುಮನ ಭಜನೆ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ಹನುಮನ ಭಜನೆಯಲಿ ಕಾಣು; ಕಣ್ಣು ಮುಚ್ಚಿ ರಾಮನ ಕಾಣುವವನ
ಮನದಲಿ ಕಾಣು, ಅಂತರಂಗದಲಿ ಭುಜಂಗ ತಾನೇ ಭಜಿಸುವವನ

ಹೊರಗೆ ವಾನರನ ತೋರಿಕೆಯಷ್ಟೇ ಕೇಳೋ ಮಾನವನೇ ಕಿವಿಯಿಟ್ಟು
ಪಾರು ಮಾಡುವ ನರರ, ಮಾನವನೇ ತ್ವರಿತದಿ ಬಲದ ಬೆನ್ನೇರಿ ಕೂಡು

ಸಂತರೆಲ್ಲರೂ ಸತತ ಅಂತರಂಗದಲಿ ನೆನೆದರೆ ಗೋಚರಿಸದ ಧೀಮಂತ
ಅತ್ತಿತ್ತ ಹುಡುಕದಿರು, ಅತ್ತಿತ್ತ ಓಡದಂತ ಮಾನವನ ಮನವೇ ಹನುಮಂತ 

Wednesday, June 6, 2012

ಸಂಸ್ಕೃತಿಗೆ ಪವಮಾನ


ಸಂಸ್ಕೃತಿಗೆ ಪವಮಾನ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ಕ್ಷೀರ, ತೀರ್ಥ ಕುಡಿದವರ ಹೆಮ್ಮೆಯ ಸಂತತಿಯವರಪ್ಪ
ಬೀರು ಬಾಟಲು ಕೈಲಿ ಗಟ ಗಟಿಸುವರಾಗಿ ಬಿಟ್ಟಿದ್ದಾರಪ್ಪ 

ಊದಿನ ಕಡ್ಡಿಯ ಹೊಗೆಯು ಇವರಿಗೆ ಸ್ವಲ್ಪ ಅಲರ್ಜಿಯಂತೆ
ಬೀಡಿಯುದ್ದದ್ದು ಸಿಗಾರೆಂಬುದು, ಸಿಗರೇಟು ಸೇವನೆಯಂತೆ

ಬಾಯಿ ತುಂಬಾ ಮಂತ್ರ, ಜನಿವಾರ, ಲಿಂಗಗಳಿಗೆ ಭಕ್ತಿಯಿತ್ತು
ನಾಯಿ ಜಾತಿಯಿವರದು ಈಗ ಬರೀ ಪೋಲಿ ಪದಗಳು ಬರುತ್ತೆ

ಆಡಂಬರದ ಆ ಮಠ, ಈ ಮಠ ಅಂತ ಕಂಠ ಪೂರ್ತಿ ಬೊಕಳೆಯು
ಮಡಿಯಲ್ಲಿ ಸೂಟು ಟೈ ಧರಿಸಿ ತಿನ್ನುವರು ದನ, ಹಂದಿ, ಕೋಳಿಯ

ಅವಮಾನವೇ ಇಲ್ಲದವರ ಬಗ್ಗೆ ಏನು ಹೇಳಿದರೂ ನಾವೇ ಕೆಟ್ಟವರು
ಪವಮಾನ ಹಾಡಿ ಬಿಡೋಣವೇ ಅವನತಿಯಾಯ್ತು ಸಂಸ್ಕೃತಿಯ ಹೆಸರು