ನನ್ನದಾವುದೂ ಅಲ್ಲ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ
ಸರಾಗದ ಮಾತಿನಲಿ, ಹಾಡುವ ರಾಗದಲಿ ನನ್ನತೆಯಿಲ್ಲ
ಗುನುಗುನಿಸುವ ಗಾನದಲಿ, ಗೆಜ್ಜೆಯ ತಾಳದಲಿ ನನ್ನೆದೆಯಿಲ್ಲ;
ಭವ ಸಮುದ್ರದ ಆಳದಲೆಲ್ಲೋ, ಎಂತೋ
ಭಾವ ಮಥನವಂತೂ ಆಗಿರಬಹುದೇನೋ,
ಅದಾವ ರೀತಿಯ ಅರಿವಿಲ್ಲದವ ಹುಲು ಮಾನವ ನಾನು
ಗಂಗಮ್ಮನಂತೆ ಕಾವ್ಯ ಸುಂದರಿಯು ಧಾವಿಸಿ
ತನು, ಮನ ಎನ್ನದೆಲ್ಲವನೂ ತನ್ನದಾಗಿಸಿ
ಹರಿದು ಭರ ಭರದಿ ನಿಮ್ಮನೆಲ್ಲಾ ಸೇರುವಳು
ರಸಿಕತೆಯ ಕುಣಿಸಿ ತಣಿಸುವ ಚೆಲುವೆ
ಪುಟ್ಟಿದವಳೆಲ್ಲೋ ಅದಾವುದೂ ಹೇಳುವಳಲ್ಲ
ಅವಳ ಧಾರೆಯ ದಾರಿಯಲಿ ನಾನಿರುವುದಂತೂ
ನನ್ನ, ನನ್ನತೆಯ, ಭಿನ್ನತೆಯಲಿ ಪುಳಕಿಸುವುದಂತೂ
ಹುಟ್ಟಿನಿಂದಲೇ ಮುತ್ತು ಕೊಟ್ಟು ಕೊಟ್ಟ ದಿಟ ಪ್ರಸಾದ
No comments:
Post a Comment