ಅವತರಿಸು ಬೇಗ ಕಂದಾ!
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ
ಅಂದದ, ಚೆಂದದ, ಮುದ್ದಿನ,
ನಂದ ನಂದನನೆಯೇನೋ ಎಂಬುವಂತಹದು
ಹಡೆವುದು ಇನ್ನೂ ಮುಂದೆ ಎಂದೋ.
ಅಂಡದಲಿ ಕೂಡ ಮೂಡಿ ಬಂದಿಲ್ಲ
ಚಿಕ್ಕಪ್ಪ, ಚಿಕ್ಕಮ್ಮಂದಿರ ಕಣ್ಣಲ್ಲಿ ಕನಸಾಗಲೇ
ಚಿತ್ತಾರವಾಗಿ ಬಿತ್ತಿ ಬಿಟ್ಟಿದೆ.
ಸಾವಿರ ಸಾವಿರ ನಾವಿಕರು
ಒಕ್ಕೊರಳಲ್ಲಿ ಪೊಗಳಿ
ನುಡಿದು, ಪಾಡಿ, ಹಡೆವ
ಮುಂದೆಯೇ ಕಂದನಿಗೆ ಚೆಂದದ
ಪೆಸರುಗಳ ಮಲ್ಲಿಗೆಯ ಮಾಲೆಯನೇ
ಹೆಣೆದಿದ್ದಾರೆ, ಕುಣಿಯುತ ತಣಿದಿದ್ದಾರೆ.
ಕಂದಾ! ನೀ ಎಂತಹಾ ಚೆಂದಾ!
ಮುಕುಂದನಿಗೂ ಮೀರಿದ ಕಂದನಲ್ಲವೇ
ಒಂದೇ ಕಂದನಿಗೆ ನೂರೆಂಟು ನಾಮ
"ಕಂದ ಒಂದೇ ನಾಮ ಹಲವು"
ಕನ್ನಡವನಾಡುವ, ಕಸ್ತೂರಿಯ ಬೀರುವ ಬಾರೋ!
ನಿನಗೆ ಬಾರೋ ಎನ್ನಲೋ?
ನಿನ್ನ ಬಾರೇ ಚದುರೆ, ಸುಂದರಿ ಎಂದೆಲ್ಲಾ ಕರೆಯಲೋ?
ಕವಿಯ ಹೃದಯದಾಳದಿಂದ ಹೊರ ಬಂದು
ನುಡಿ, ಕುಣಿದಾಡು, ಮೆರೆದಾಡು
ಬಾ ಬೇಗ ನಮ್ಮೆಲ್ಲರ ಮುದ್ದು ಕಂದ!
No comments:
Post a Comment