ಮೂರ್ತಿಯ ಬೆಸವಾದದ ತರ್ಕ
ಹಣ್ಣು ಸಿಹಿ, ಕಹಿ ಕಾಯಿ, ಹುಳಿ ಲೊಟ್ಟೆ, ನಾಲಗೆಯ ಹಿಂಡುವ ಕ್ಷಾರ
ತಿನ್ನು ಹದದಲ್ಲಿ ಬೆರೆಸಿ, ಕಲಸಿ, ಬೇರೆ, ಬೇರೆ, ಹೇಗೆ ಬೇಕಾದರೂ
ಸತ್ಯವನು ನುಡಿ ಒಮ್ಮೊಮ್ಮೆ ಮಾತ್ರ, ವಾರಕೋ, ವರುಷಕೋ ಸಾಕು
ವ್ರತವನ್ನು ಮಾತ್ರ ಹಿಡಿದಿಯದೆಯೇ, ಮಿತಿಯಿರಲಿ ನಿಜಕೆ ಬಲು ಜೋಕೆ
ಹರಿಶ್ಚಂದ್ರನದು ಒಂದು ತರಹದ ಶಾಪ, ವಿಧಿ ಸುಡುಗಾಡು ಕಾಯುವುದು
ಸರಿ, ಸಮಗಳ ಅರಿಯದಾ ಮೂಢ, ಗೊಡ್ಡು ಸತ್ಯವಾಡಿದನವನು ಸತ್ಯವಾದಿ
ಸಿಹಿಯಾದರೂ ಒಮ್ಮೊಮ್ಮೆ, ಕಹಿಯಾದೀತು ಅದೇ ಸತ್ಯ ಮತ್ತೊಮ್ಮೆ ತಿಳಿ
ಕಹಿಗೆ ಸಿಹಿ ಬೆರೆಸಿ ಸುಳ್ಳಿನ ಲಾಡು ಉಂಡೆಗಳನು ಹಂಚಿದರೆ ತಪ್ಪೇನಿಲ್ಲ
ಕಳ್ಳನವ ಕಿಲಾಡಿ ಕಿಟ್ಟ, ಆಡಿಸಿದಾತ ದೊಡ್ಡಣ್ಣ ಬಾಯಲ್ಲಿ ಕೂಡ ಸುಳ್ಳು ಕಂತೆ
ಮಲ್ಲಯುಧ್ಧ, ಗಧೆಯಿಂದ ಹೊಡೆದಾಡುವಾಗಲೂ ಮೋಸವನು ಕಲಿಸಿದಾತ
ವನವಾಸದ ಅತಿ ಆಸೆಯಿದ್ದರೆ, ಸತಿಯ ಕಳೆದು ಅಳು ಅಪ್ಪನ ಮಾತು ಪಾಲಿಸಲು
ಬೆಸ ಕಾರಣಕೆ ಅಟ್ಟು ಸತಿ ಸೀತೆಯ ಮತ್ತೊಮ್ಮೆ ಕಾಡಿಗೆ ಅಗಸನೋರ್ವ ಬೊಗಳಲು
ವ್ಯಾಸ, ವಾಲ್ಮೀಕಿಯರ ಕತೆಗಳನು ವ್ಯಥಾ ತಥಾ ಅಳವಡಿಸದೆಯೇ ತಿಳುವಳಿಕೆಯಲಿ
ಬೆಸದ ಬತ್ತಳಿಕೆಯ ಬೆನ್ನ ಮೇಲೆ ಹೊತ್ತು, ಬಿಲ್ಲಿಗೆ ಸಮಯೋಚಿತ ಹೂಡು ಮರ್ಮದಲಿ