ನಾಳೆ, ನಾಳೆ, ನಾಳೆಯೆಂದು .......
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ
ಬಾಳಿನಲ್ಲಿ ನಾಳೆಯೇ ಹಿರಿದೆಂದು, ಮೆರೆವೆ ಮುಂದೆ ಎಂದು, ಇರುವುದೆಲ್ಲಾ ಉಳಿಸಿದೆ
ಇಂದು ಬಂದು, ನನಗೆಂದೇ ಏನೇನೋ ತಂದು, ಕಾಯುತ್ತಿತ್ತು ಅತಿಶಯದ ಕಾತರದಿ
ಮುಂದು, ಮುಂದು ಎಂದುಕೊಂಡು, ಸಂದದೆಲ್ಲಾ ನನ್ನದಲ್ಲವೆಂದು ಕಾಲ ಕಳೆಯುತಿದ್ದೆ
ಜಾರಿ, ಜಾರಿ, ವಾರ, ವಾರ ಸರಿಯುತ್ತಿತ್ತು ತ್ವರೆಯಲಿ; ಈಟೂ, ತುಸೂ ಮೆರೆಯದಾದೆ
ಬಾರಿ, ಬಾರಿ ಕೈಹಿಡಿದು ಎಳೆದರೂ, ಇಂದೇ, ಈಗಲೇ ಬದುಕಬೇಕೆಂದು ತಿಳಿಯದಾದೆ
ವರುಷಗಳೇ ಓಡಿ ಹೋಯಿತೆಂದು, ಹೋದದೆಲ್ಲ ಬಾರದೆಂದು ಹೊಳೆಯುವ ಕಾಲ ಬಂದಿದೆ
ಬರಹವಿಲ್ಲದಂಥ ಖಾಲಿ ಹಾಳೆ ಮಾತ್ರ ರಾಶಿ, ರಾಶಿ ಕಡತವಾಗಿ ಸೇರಿ ಪೇರುತ್ತಾ ಬೆಳೆದಿದೆ
ಕಳೆದ ದಶಕ, ವರುಷ, ವಾರ, ಹೋರ ಕಸದ ಬುಟ್ಟಿ ಈಗ; ನಾಳೆಗಳು ಬಹಳವಿಲ್ಲದಾಗಿದೆ
ನಾಳೆಗಿಂತ ಇಂದೇ ಸತ್ಯ; ಜೀವಕೆ ಎಟುಕದ ನಾಳೆ ಸುಳ್ಳು; ಈಗಲೇ ಕುಣಿವ ಕಾಲ ಬಂದಿದೆ