Monday, July 23, 2012

ನಾಲಿಗೆ ಮೇಲೆ ಕುಣಿಯುವ ಸೂಳೆಯಂತಹ ಸುಳ್ಳು


ನಾಲಿಗೆ ಮೇಲೆ ಕುಣಿಯುವ ಸೂಳೆಯಂತಹ ಸುಳ್ಳು
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ಸುಳ್ಳು ಅಮೃತಕ್ಕಿಂತ ಸಿಹಿ; ಸುಳ್ಳೇ ಸ್ನೇಹ ಬಂಧಿಸುವ ಸಾಧನ
ಅಳುಕದೆಯೇ ಸುಳ್ಳು ಕಜ್ಜಾಯ ಹಂಚುವುದನ್ನು ಕಲಿಯೋ ಮನ

ಕುರೂಪಿಗಳನ್ನೆಲ್ಲಾ ಸುರ ರೂಪಿಗಳೋ ಎಂಬಂತೆ ನಂಬಿಸುವಾ
ಭಾರತ ಯುಧ್ಧವನ್ನೇ ಗೆದ್ದು ಕೊಟ್ಟ ಶ್ರೀ ಕೃಷ್ಣನ ಸುಳ್ಳ ಪೂಜಿಸುವಾ

ನಂಬುವರಯ್ಯಾ ನಯವಾಗಿ ನೀವಿದ ಸುಳ್ಳು ತೈಲಾಂಜನವನ್ನೇ
ಉಂಬುವರಯ್ಯಾ ಪರವಾಗಿಲ್ಲ ಸಕ್ಕರೆ ಹೇರಿದ ವಿಷದ ಬಟ್ಟಲನ್ನೇ 

ಊರು ಕೇರಿಗಳಲ್ಲಿ, ರಾಜನರಮನೆಯಲ್ಲಿ ನಿಜಕೆ ಮುಚ್ಚುವರು ಬಾಗಿಲು
ಹಾರುವರಾದರೂ, ಕುರುಬರಾದರೂ, ಸೂಳೆಯೂ, ವ್ಯಾಪಾರಿಗಳೂ 

ದಿನಕ್ಕೊಂದೋ, ಎರಡು, ಮೂರೋ, ನೂರೋ ಎಲ್ಲಾ ಎಣಿಸುವರಾರು
ದೈನ್ಯದಲಿ ಇಷ್ಟ ದೇವರ ಬೇಡುವಾಗಲೇ ಬೊಕಳೆಯನ್ನು ಹೊಡೆಯುವರು

Friday, July 20, 2012

ಕಲೆಯೆಲ್ಲಾ ನಿನಗಿತ್ತ ಸಾಲ


ಕಲೆಯೆಲ್ಲಾ ನಿನಗಿತ್ತ ಸಾಲ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ನುಡಿಯಿಲ್ಲದಾ, ಅಕ್ಷರಗಳೇ ಇದ್ದಿಲದಾ ಕಾಲವಿತ್ತಲ್ಲವೇ?
ಬಿಡಿಸಿ ಕವಿತೆಯ ಹಾಡುವಾ ಕವಿಗಳೇ ಇರಲಿಲ್ಲವಲ್ಲವೇ?

ಕಡೆದು ಕಲ್ಲಲಿ ಚಿತ್ತಿರವೇ ಬಿತ್ತರಿಸುವಂತೆ ಸಾರಿದರಲ್ಲವೇ
ನಡೆದ, ಓಡಿದ, ಜಿಗಿದಾ ಜಂತು ಮ್ರುಗಗಳನು ಕೆತ್ತಿದರಲ್ಲವೇ?

ಮಂಡೆ ಬಲಿತು ಮಂಗ ಮಾನವನಾಗುವ ಮೊದಲು ಹೇಗಿತ್ತು
ಚಂಡೆ, ಮದ್ದಳೆ ಬದಲು ಕೋತಿ ಕೇಕೆ ಹಾಕಿ ಕುಪ್ಪಳಿಸಿ ಕುಣಿದಿತ್ತು

ನಾಡಿಗನು ನೀನಿರಬಹುದು ಇಂದು; ಕಲೆ ತಲೆಮಾರಿನ ಆಸ್ತಿಯಷ್ಟೆ
ಹಡೆದವಳು ಇಳೆಯಲಿ ಕಲೆಯ ಸಂಪತ್ತೂ ಬದಲಿಸಿದಳು ಅವಳಷ್ಟೇ!

ಬಡವ ನಾ ಕೊಟಿಯಲಿ ಒಬ್ಬ


ಬಡವ ನಾ ಕೊಟಿಯಲಿ ಒಬ್ಬ
ಡಾಕ್ಟರ್ ಕೆ. ಆರ್. ಎಸ. ಮೂರ್ತಿ

ನಾಲಿಗೆಗೆ ನಾಲ್ಕಗಳು; ನಾಲ್ಕು ಮೊಳ ಮೈಮೇಲೆ
ಮಲಗಲಿಕ್ಕೆ ಆರೇಳು ಅಡಿ; ತಲೆ ದಿಂಬಿನ ಮೇಲೆ

ಹಗಲಾದರೆ ಹೆಗಲಮೇಲೆ ಮಣ ಭಾರ ಜೀತ ಹೊತ್ತು
ಮುಗಿಲು ಕತ್ತಲೆ ಕವಿದರೆ ಗುಡಿಸಲಿಗೆ ಹೋಗಿ ಅವಿತು

ದಿನ, ವಾರ, ವರುಷ, ದಶಕಗಳೇ ಮುಗಿಯಿತಲ್ಲಾ ಓಡಿ
ತನುವು ಯೌವನವ ಕಳೆದು, ಮುದಿ ಮನದಿ ಖೇದ ಕಾಡಿ

ಕಡೆಯಾ ಕಡೆಯೇ ಕಾದೂ, ಕಾದೂ ಅದೂ ಬೇಕಾದ ಹಾಗೆ
ನಡೆದೂ ಬಿಟ್ಟರೆ ಬೇಡಪ್ಪ ಬೇಡ; ಇನ್ನೇನೂ ಬೇಡ ಕೊನೆಗೆ 

Friday, July 13, 2012

ಅಂತಿಮದೆಡೆಗೆ


ಅಂತಿಮದೆಡೆಗೆ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ಎತ್ತಲೂ, ಕತ್ತೆತ್ತಿದಾಗಲೂ ಸುತ್ತಿಕೊಂಡಿದೆ ಕಪ್ಪಾಗಿ ಕಾಳ ಕತ್ತಲೇ ಆವರಿಸಿಕೊಂಡಿದೆ
ಮತ್ತೆ, ಮತ್ತೆ ಭೀತಿಯ ಭೂತ ನೆತ್ತಿ ಹತ್ತಿ ಅಣಕಿಸುತಾ ಕಿಸಿಕಿಸಿ ನಗುತಾ ಕುಣಿಯುತಿದೆ


ಜಗ್ಗಿಸಿ ಝಾಂಗ ಬಲವನೇ ಕುಗ್ಗಿಸಿ, ಮೊಣಕಾಲುಗಳ ವಿಕಾರ ತಾಳದಿ ಅಲಾಡಿಉತಿದೆ 
ಮೊಗದ ದವಡೆಯ ನಡುಗಿಸಿ, ಹಲ್ಲಿನ ಸಾಲುಗಳ ಚಿಟಿಕೆಯಂತೆ ಚಟ ಚಟ ಬಾರಿಸುತಿದೆ 

ಲಗಾಮು ಕಳಚಿ ಕಾಲ ರಥದ ಕುದುರೆಗಳು ಹೇಸರಗತ್ತೆಗಳೋ ಎಂಬಂತೆ ಪರಾರಿಯಾಗಿವೆ
ಹಗುರಗೊಂಡು ಚಕ್ರಗಳೆರಡೂ ಬೇರೆ ಬೇರೆ ದಿಕ್ಕುಗಳ ಕಡೆಗೆ ಗುಡುಗಿಕೊಂಡು ಹೋಗಿಯಾಗಿದೆ 

ಈಗ ಗತಿಯೇ ನಾಪತ್ತೆಯಾಗಿ, ತಲೆಯ ಮೇಲೆ ಕೈಹೊತ್ತುಕೊಂಡು ಅತ್ತು ಅತ್ತು ಕಣ್ಣು ಬತ್ತಾಗಿದೆ
ಸಾಗುವುದಾದರೂ ಎಂತು? ಕುಗ್ಗಿ ನೆಲಕೆ ಕುಸಿಯುವುದೇ ಖಾತರಿ ಸರಿಯೇ ಎನ್ನುವಂತಾಗಿದೆ 

ಎಂದೂ ಎನ್ನೆದೆಯಲ್ಲಿಯೇ


ಎಂದೂ ಎನ್ನೆದೆಯಲ್ಲಿಯೇ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ನೀನಿದ್ದಾಗಲೂ, ಈಗಿಲ್ಲದಾಗಲೂ, ನಿನ್ನ ನೆಲೆ ಇದ್ದುದು ಒಂದೇ
ನನ್ನೆದೆಯಲ್ಲಿ ಇದ್ದವಳು ಬೇರೆಲ್ಲಿಗಾದರೂ ಹೋಗಲಾಗಬಹುದೇ?

ಚೊಕ್ಕದಿ ಕಡ್ಡಿಗಳ ಮೇಲೆ ಕಡ್ಡಿಗಳ ಇಡುತ ಗೂಡನು ಕಟ್ಟಿದೆವಲ್ಲವೇ?
ಹಕ್ಕಿಗಳು ಪಕ್ಕ ಪಕ್ಕದಿ ಇದ್ದ ಗುಂಡಿಗೆಯ ಗೂಡನ್ನು ಅಲ್ಲಡಿಸಬಹುದೇ?

ಅಂದೂ 'ನೀನೆಂದೆಂದೂ' ಎಂದೆಲ್ಲಾ ಅಂದಿದ್ದು ಸುಳ್ಳಾಗಬಹುದೇ?
ಅಂತಿಮದಲ್ಲಿಯೂ ನನ್ನೆದೆಯಲ್ಲಿಯೇ ನೀನಿರುವ ಖಾತರಿ ನನ್ನದೇ


ಬಂದವಳು ನನ್ನೆಡೆಗೆ ಸೇರಿದವಳು ಭರದಲಿ ಹಾರಿ ನನ್ನ ಗುಂಡಿಗೆಗೆ
ಅಂದಿನಂತೆಯೇ ಇಳೆಯೂ, ಚಂದಿರ, ರವಿ, ತಾರೆಗಳೂ ಇರುವವರೆಗೆ

ನಿನ್ನಾಲಿಂಗದ ಸಂಗವೇ ಸಗ್ಗ


ನಿನ್ನಾಲಿಂಗದ ಸಂಗವೇ ಸಗ್ಗ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ತರವಲ್ಲವೇ ಸಾರಸ ಸುರ ಸುಂದರೀ ಕಾವ್ಯ 
ಮರೆತಿಲ್ಲವೇ ಬರಹದ ಸುವ್ರತ ಪ್ರಮಾಣವ 

ಭಾರವಾಗಿದೆ ನೊಗವ ತಗ್ಗಿಸಿ ಭವವ ಹಿಂಗಿಸಿ
ಭರದಲಿಯಾದರೂ ಬರೆದು ವ್ರತವ ನಿನಗೊಪ್ಪಿಸಿ 

ಪೊರೆದು ತ್ವರೆಯಲಿ ಶಿರದ ಮಂಚದಿ ನೀ ನರ್ತಿಸಿ
ಕರೆದು ಕೊಂಡೊಯ್ಯೇ ಸರಸರನೇ ಪರಕೆ ಧಾವಿಸಿ

ಹೊರೆಯು ಅತೀ ಆಗಿಬಿಟ್ಟಿದೆ ಆಗದು ಕಣ್ಣ ಮಿಟುಕು
ಮೆರೆಯುವ ಹಂಬಲ ನಿನ್ನಾಲಿಂಗದಿ ಬೇಕೇ ಬೇಕು

Saturday, June 30, 2012

ನೀವೇನಾದರೂ?..... ಯಾರಿಗಾದರೂ?


ನೀವೇನಾದರೂ?..... ಯಾರಿಗಾದರೂ?
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ಅವರು ಇವರಿಗೆ; ಇವರು ಮತ್ತೆ ಅವರಿಗೆ
ಕೆಲವರು ಬಾಗಿಲು ಮುಚ್ಚಿ, ಗುಟ್ಟು ಗುಟ್ಟಾಗಿ

ಪ್ರಿಯ ಪ್ರೇಯಸಿಗೆ; ಪ್ರೇಯಸಿಯು ಇನ್ಯಾರೋ ಒಬ್ಬನಿಗೆ
ಪ್ರಿಯನಿಗೆ ಮಾತ್ರ ಗೊತ್ತಿಲ್ಲ, ಏಕೆಂದರೆ ಗುಟ್ಟು ಗುಟ್ಟಾಗಿ

ಪಕ್ಕದ ಮನೆಯವರೋ, ಅಕ್ಕ ಪಕ್ಕದ ಬೀದಿಯವರೋ
ಸಿಕ್ಕವರಿಗೆಲ್ಲಾ ಆಗಿಹೋದರೆ ನಡೆದು ಹೋಗಲಿ, ಗುಟ್ಟಾಗಿ

ಕೆಲವರಂತೂ ತಮ್ಮ ಬಾಸ್ಗೇ; ಮತ್ತೆ ಕೆಲವರು ಪುಡಾರಿಗೆ
ಕೆಲಸವೇನಾದರೂ ಆಗಬೇಕಾದರೆ, ಕೊಡುವರು ಗುಟ್ಟಾಗಿ

ಕೊಟ್ಟವರಿಗೂ ಕೆಲಸವಾಗಿ, ಇಸಕೊಂಡವರಿಗೂ ಸಿಕ್ಕಿತಲ್ಲ!
ಯಾರಿಗೂ ಹೇಳ ಬೇಡಿ, ನಮ್ಮಲೇ ಇರಲಿ ಗುಟ್ಟಾಗಿ

ಹಚ್ಚಿ, ಚೆನ್ನಾಗಿ ಹಚ್ಚಿ; ನಯವಾಗಿ ಹಚ್ಚಿ; ನೀವಿ ಹೆಚ್ಚಾಗಿ
ನೀವಿಸಿ ಕೊಂಡವರಿಗೂ ಹಾಯಿ - ಹಾಯಿ; ನೀವಿದವರಿಗೂ

ಬೆಣ್ಣೆಯ ಬೆಲೆ ತಗ್ಗಿ ಹೋಗಿದೆ; ಕೆ. ಜಿ. ಅಲ್ಲ ಮಣಗಟ್ಟಲೆ
ಎಲ್ಲಿ ಬೇಕಾದರೂ, ಹೇಗಾದರೂ, ಯಾವಾಗಲಾದರೂ

ಬೆಣ್ಣೆ ಕದ್ದ ಕಳ್ಳನೊಬ್ಬ ಊರು ಕೇರಿಯ ಹುಡುಗಿಯರೆಗೆಲ್ಲ
ಸುಖವಾಗಿರಿಸಿದನೆಂದೂ ಯಾರೋ ಋಷಿಗಳು ಬರೆದದ್ದು 

ಬರೆದವರ ಪಾಪ ಪುಣ್ಯಗಳು ನಮಗೆ ಮಾತ್ರ ಬೇಡಪ್ಪ
ಕವಿ ಕಲ್ಪನೆಯೂ? ಕಲಿಯುಗದ ಅಲ್ಪ ನನ್ನ ಅನಿಸಿಕೆಯೂ?

ನಿಮಗೇನಾದರೂ ಗೊತ್ತೇ? ನಿಮಗೆ ನೀವಿದ ಅನುಬಂಧವಿದೆಯೇ
ನೀವಿಸಿಕೊಂಡಾಗಿನ ಸವಿ ನೋವಿನ ನೆನಪೆನಾದರೂ ಇದೆಯೇ?