Friday, June 22, 2012

ನನ್ನದಾವುದೂ ಅಲ್ಲ


ನನ್ನದಾವುದೂ ಅಲ್ಲ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ಬರಹದಲಿ ಎನ್ನದಾವುದೂ ತುಸೂ ಕುರುಹಿಲ್ಲ;
ಸರಾಗದ ಮಾತಿನಲಿ, ಹಾಡುವ ರಾಗದಲಿ ನನ್ನತೆಯಿಲ್ಲ
ಗುನುಗುನಿಸುವ ಗಾನದಲಿ, ಗೆಜ್ಜೆಯ ತಾಳದಲಿ ನನ್ನೆದೆಯಿಲ್ಲ; 

ಭವ ಸಮುದ್ರದ ಆಳದಲೆಲ್ಲೋ, ಎಂತೋ
ಭಾವ ಮಥನವಂತೂ ಆಗಿರಬಹುದೇನೋ,
ಅದಾವ ರೀತಿಯ ಅರಿವಿಲ್ಲದವ ಹುಲು ಮಾನವ ನಾನು

ಗಂಗಮ್ಮನಂತೆ ಕಾವ್ಯ ಸುಂದರಿಯು ಧಾವಿಸಿ
ತನು, ಮನ ಎನ್ನದೆಲ್ಲವನೂ ತನ್ನದಾಗಿಸಿ
ಹರಿದು ಭರ ಭರದಿ ನಿಮ್ಮನೆಲ್ಲಾ ಸೇರುವಳು

ರಸಿಕತೆಯ ಕುಣಿಸಿ ತಣಿಸುವ ಚೆಲುವೆ
ಪುಟ್ಟಿದವಳೆಲ್ಲೋ ಅದಾವುದೂ ಹೇಳುವಳಲ್ಲ
ಅವಳ ಧಾರೆಯ ದಾರಿಯಲಿ ನಾನಿರುವುದಂತೂ
ನನ್ನ, ನನ್ನತೆಯ, ಭಿನ್ನತೆಯಲಿ ಪುಳಕಿಸುವುದಂತೂ
ಹುಟ್ಟಿನಿಂದಲೇ ಮುತ್ತು ಕೊಟ್ಟು ಕೊಟ್ಟ ದಿಟ ಪ್ರಸಾದ

ನನ್ನತೆ


ನನ್ನತೆ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ನನ್ನ ನಾ ತುಸು ತಿಳಿಕೊಂಡೆ; ನಾನೆಂಬುದನೇ ಕಳಕೊಂಡೆ
ನನ್ನದೇನೂ ಇದ್ದಿಲ್ಲ, ಇಲ್ಲ, ಇರುವುದಿಲ್ಲವೆಂಬುದ ಅರಿತುಕೊಂಡೆ

ಚಿನ್ನವನು ಪುಟಕ್ಕೆ ಅರ್ಪಿಸಿದಂತೆ ಕಷ್ಟದ ಕಾಷ್ಟದಲಿ ಬೆಂದುಕೊಂಡೆ
ಖಿನ್ನ ಮನವಾದಾಗ ಸ್ವಭಾವವನು ಘನವಾಗಿಸಿ ಸಂಬಾಳಿಸಿಕೊಂಡೆ

ಕಣ್ಣು ನೀರಿನ ಚಿಲುಮೆಯಾದಾಗ ಗಳಗಳನೆ ಅಳುತ್ತ ಹಗುರಗೊಂಡೆ
ತನು ಜಡತೆಯಿಂದ ಬಡವಾಗಿದ್ದಾಗ ಧೃಡತೆಯಿಂದ ಬಲತುಂಬಿಕೊಂಡೆ

ಇನ್ನೂ ಏನೇನೋ ಕಾದಿದ್ದರೂ, ಬರುವುದೆಲ್ಲವನೂ ಬರಲೆಂದುಕೊಂಡೆ
ಏನೂ ಅಗಲಿಸದ, ಏತಕ್ಕೂ ಹೆದರದ ವಿಭಿನ್ನ ಜೀವಿ ನಾನಾಗುವೆ ಮುಂದೆ

Sunday, June 10, 2012

ಇದುವೇ ಹನುಮನ ಭಜನೆ


ಇದುವೇ ಹನುಮನ ಭಜನೆ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ಹನುಮನ ಭಜನೆಯಲಿ ಕಾಣು; ಕಣ್ಣು ಮುಚ್ಚಿ ರಾಮನ ಕಾಣುವವನ
ಮನದಲಿ ಕಾಣು, ಅಂತರಂಗದಲಿ ಭುಜಂಗ ತಾನೇ ಭಜಿಸುವವನ

ಹೊರಗೆ ವಾನರನ ತೋರಿಕೆಯಷ್ಟೇ ಕೇಳೋ ಮಾನವನೇ ಕಿವಿಯಿಟ್ಟು
ಪಾರು ಮಾಡುವ ನರರ, ಮಾನವನೇ ತ್ವರಿತದಿ ಬಲದ ಬೆನ್ನೇರಿ ಕೂಡು

ಸಂತರೆಲ್ಲರೂ ಸತತ ಅಂತರಂಗದಲಿ ನೆನೆದರೆ ಗೋಚರಿಸದ ಧೀಮಂತ
ಅತ್ತಿತ್ತ ಹುಡುಕದಿರು, ಅತ್ತಿತ್ತ ಓಡದಂತ ಮಾನವನ ಮನವೇ ಹನುಮಂತ 

Wednesday, June 6, 2012

ಸಂಸ್ಕೃತಿಗೆ ಪವಮಾನ


ಸಂಸ್ಕೃತಿಗೆ ಪವಮಾನ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ಕ್ಷೀರ, ತೀರ್ಥ ಕುಡಿದವರ ಹೆಮ್ಮೆಯ ಸಂತತಿಯವರಪ್ಪ
ಬೀರು ಬಾಟಲು ಕೈಲಿ ಗಟ ಗಟಿಸುವರಾಗಿ ಬಿಟ್ಟಿದ್ದಾರಪ್ಪ 

ಊದಿನ ಕಡ್ಡಿಯ ಹೊಗೆಯು ಇವರಿಗೆ ಸ್ವಲ್ಪ ಅಲರ್ಜಿಯಂತೆ
ಬೀಡಿಯುದ್ದದ್ದು ಸಿಗಾರೆಂಬುದು, ಸಿಗರೇಟು ಸೇವನೆಯಂತೆ

ಬಾಯಿ ತುಂಬಾ ಮಂತ್ರ, ಜನಿವಾರ, ಲಿಂಗಗಳಿಗೆ ಭಕ್ತಿಯಿತ್ತು
ನಾಯಿ ಜಾತಿಯಿವರದು ಈಗ ಬರೀ ಪೋಲಿ ಪದಗಳು ಬರುತ್ತೆ

ಆಡಂಬರದ ಆ ಮಠ, ಈ ಮಠ ಅಂತ ಕಂಠ ಪೂರ್ತಿ ಬೊಕಳೆಯು
ಮಡಿಯಲ್ಲಿ ಸೂಟು ಟೈ ಧರಿಸಿ ತಿನ್ನುವರು ದನ, ಹಂದಿ, ಕೋಳಿಯ

ಅವಮಾನವೇ ಇಲ್ಲದವರ ಬಗ್ಗೆ ಏನು ಹೇಳಿದರೂ ನಾವೇ ಕೆಟ್ಟವರು
ಪವಮಾನ ಹಾಡಿ ಬಿಡೋಣವೇ ಅವನತಿಯಾಯ್ತು ಸಂಸ್ಕೃತಿಯ ಹೆಸರು



Tuesday, May 29, 2012

ಏಕಮೇವ ಕಥೆಗಾರ


ಏಕಮೇವ ಕಥೆಗಾರ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ದೋಣಿಯೇ ಮಂಚ; ಬೆಸ್ತರಬಲೆಯ ಮೇಲೆ ಕಾಮ ಕುಸ್ತಿ 
ಕ್ಷಣವೂ ಕಾಯಲು ಸಂಯಮವಿಲ್ಲದಂತೆ ಅತಿ ಕಾಮಾವಸ್ಥೆ

ಕಾಮಾತುರನು ಕುಮಾರಿಯ ಮಾತೆಯಾಗಿಸಿದಂತಹ ಅವಸ್ಥೆ
ಕುಮಾರನಿವ ಹುಟ್ಟಿದಾಗಲೇ ಮಹಾಜ್ಞಾನಿ ವ್ಯಾಸನಿವನಷ್ಟೇ

ಉಂಡನೋ, ಮಿಂದನೋ, ಗುಟುಕು ನೀರು ಕುಡಿದಿರಬೇಕಷ್ಟೇ
ಚಂಡಿಯ, ಅವಳ ಗಂಡನ ಕಥೆಯಿಂದ ಓ ನಮಃ ಅಂದನಷ್ಟೇ

ಸಾವಿರಾರು ಮಹಾ ಪಾತ್ರಗಳ ಹೆಣೆದು ಕಥೆಯ ಬೆಳೆಸಿದಾತ
ಕಾವಿ ಮಾತ್ರವೇ ಧರಿಸಿದರೂ, ಕಾಮದ ಸಿಹಿಯನ್ನು ಬೆರೆಸಿಬಿಟ್ಟ

ಘಾಸಿ ಅತಿಯಾದ ಋಷಿಗಳಿಂದ ರಾಜವಂಶವನು ಉಳಿಸಿಕೊಟ್ಟ
ದಾಸಿಯರಿಗೆ ತಾಪಸಿಯಿಂದ ನಿಧಾನಿ ವಿದುರ ಜ್ಞಾನಿಯ ಹುಟ್ಟಿಸಿಟ್ಟ

ಪಾಂಡುವಾದರೇನು ಕುಂತಿಗಿಲ್ಲವೇ ವರ ಋಷಿಗಳ ಮಂತ್ರದ ತಂತ್ರ?
ಅಂಡವು ಬ್ರಹ್ಮಾಂಡ ಸಮದ ಗಾಂಧಾರಿಯವಳು ಕುರುಡನ ಹೆಂಡತಿ!

ರಾಜಧಾನಿಯಿಂದ ಬೆಳೆಯಿತು ಕಥೆಯು ಕಾಡಿಗೆ; ವೇಷ ಮರೆಸುವ ಗತಿ
ಲಜ್ಜೆಯಿಂದ ನಡೆದರೂ ಪಾಂಚಾಲಿಯ ಗೆಜ್ಜೆ ನಿನಾದ ಕರೆದಿತ್ತು ಕೈಯೆತ್ತಿ

ನೀಚ ಕೀಚಕನ ತೊಡೆಯ ಹೊಡೆದೆಬ್ಬಿಸಿತ್ತು; ಮಲ್ಲ ಗಂಡನ ಕೆರಳಿಸಿತ್ತು
ಹುಚ್ಚೆಬ್ಬಿಸಿತ್ತು ದುರ್ಯೋಧನನ ತೊಡೆಗೆ; ಭೀಮನ ಗಧೆಯ ಪೆಟ್ಟಿಗೆ ಬಿದ್ದಿತ್ತು

ಹದಿನೆಂಟು ಇವನಿಗೆ ಮಹಾಪ್ರಾಣ; ಹದಿನೆಂಟರ ಭಗವದ್ಗೀತೆಯು ಹಾಡಿತ್ತು
ಎದಿರು ಯುಧ್ಧ ಕಾದಿದ್ದರೂ, ಕಾದುವ ಮುಂಚೆ ಕೃಷ್ಣನ ಹೆಸರಿನಲ್ಲಿ ಅಧ್ಯಾತ್ಮವಿತ್ತು

ಬೆಲ್ಲಕ್ಕೆ ಹೊಲಸು ಬೆರೆಸಿ, ಛಲಕ್ಕೆ ಒಲವು ಸೇರಿಸಿ, ನವರಸ ಮಸಾಲೆ ಔತಣವಿತ್ತ
ಮಲ್ಲರನು ಮಲ್ಲರೊಡನೆ ಸೆಣೆಸಿ, ಬಾಣದಿಂದ ಬಾಣವನ್ನು ಕತ್ತರಿಸಿ ರಣವ ನಡೆಸಿದ್ದ

ಎಷ್ಟೋ ಅಕ್ಶೋಹಣಿ ಯೋಧರನು ಯುಧ್ಧದಲಿ ರಕ್ತವನು ಕಾರಿಸಿ ನೆಲಕ್ಕೆ ಉರುಳಿಸಿದ್ದ 
ಕಷ್ಟ ಕಾರ್ಪಣ್ಯದಲಿ ನಿನ್ನೆ, ಮೊನ್ನೆಯೋ ವಧುವಾದ ಯುವತಿಯರ ವಿಧವೆಯರನಾಗಿಸಿದ್ದ

ಕವಿವರನ ತಲೆಯಲ್ಲಿ ಕುಣಿದ, ಕೆರಳಿದ, ಮೆರೆದ, ಕಣ್ಣೀರಿಟ್ಟ ಕ್ಷಣಗಳು ಎಣಿಸಲಾಗದಷ್ಟು
ಕವಿವಾಣಿಗೆ ಸಕಲ ರೀತಿಯಲಿ ಅನುಕಂಪಿಸಿದರು ಮತ್ತೆ ಮತ್ತೆ ರಸಿಕರು ಸಾವಿರ ಕೋಟಿಯಷ್ಟು

ಮನೆ, ಮಠ, ಗೋತ್ರ, ವಂಶ ಹಾಳ ನೀನೋ


ಮನೆ, ಮಠ, ಗೋತ್ರ, ವಂಶ ಹಾಳ ನೀನೋ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ತಾಯಿ, ತಂದೆ, ತಾತ, ಅಜ್ಜಿ, ಮುತ್ತಜ್ಜರು ಕುಡಿಯುತ್ತಾ ತೀರ್ಥವನು
ಬಾಯಿ ತುಂಬಾ ನೆನೆಸಿಕೊಂಡರು  ಗುರುಗಳನು, ಹರಿ, ಹರಾದಿಗಳನು

ನೀನೇಕೋ ಗಟ, ಗಟಾಂತ, ಬೀರು, ವೈನು ಗುಂಡು ಬಹುವಿಧಗಳನು  
ಏನೇನೂ ಪಾಪ ಕರ್ಮಗಳನು ಗೈಯದಿದ್ದರೂ ಅವರಾತ್ಮಕ್ಕೆ ಶಾಂತಿಯನು

ಕರುಣಿಸುವ ಧರಣ ಬೇಡವೇನೋ ಮನೆ, ಮಠ, ವಂಶ, ಗೋತ್ರಗಳೆಲ್ಲವನೂ
ಬೆರಣಿ ತಟ್ಟಿದಂತೆ ಅವರ ಕೀರ್ತಿಗೆ ಪೂರ್ತಿ ಕಳಂಕವನು ತಂದವನೋ ನೀನು

ಮೂರ್ತಿಯ ಸಂಧಿಗ್ದ


ಮೂರ್ತಿಯ ಸಂಧಿಗ್ದ

ಕಲ್ಲಿನಲ್ಲಿ ಹಾಲು ಜೇನನು ಹಿಂಡುವ ಬಾಲಿಶ ಚಟ
ಇಲಿಗೆ ಹುಲಿಯ ವೇಷವನ್ನು ತೊಡಿಸುವೆನೆಂಬ ಹಠ
ಎಲ್ಲೆಯಿಲ್ಲದೆ ಇಲ್ಲದರಲ್ಲಿ ಎಲ್ಲವನ್ನೂ ಹುಟ್ಟಿಸುವ ಆಟ

ಕಲ್ಲು ಮಂಡೆಗೆ ಇನಿತಾದರೂ ತಿಳಿಯ ಹೇಳಬಹುದೋ
ಗೇಲಿ ಮಾಡಿ, ಕೊನೆಗೆ ತಲೆಗೆ ವಿವೇಕವ ತುಂಬಲಹುದೋ
ಬಲ್ಲಿದರು ನೀವಾದರೆ ಮಾಡುವಿರೇನು ಹೇಳಬಹುದೋ?