Friday, February 3, 2012

ಚರಿತ್ರೆಯ ಹಂಬಲ ನಮಗೇಕೆ?


ಚರಿತ್ರೆಯ ಹಂಬಲ ನಮಗೇಕೆ?
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ನಾವೆಲ್ಲಾ ಹೆಸರಿಗೆ, ಬಸಿರಿಗೆ ಪರಿಪರಿಯ ಹಾರುವರು; ಮಡಿಯ ದಾರವನ್ನು ಹುಟ್ಟು ಕುರುಡರಾಗಿ ಧರಿಸಿದವರು
ನಮ್ಮವರೆಲ್ಲಾ ಜಯದರಸಿಯ ಅರಸಿ, ಅರಸುಗಳ ವೀರತ್ವದಿ, ಒಬ್ಬರನೊಬ್ಬರು ಕ್ರೂರದಲಿ ಕೊಂದು ಮೆರೆದವರು

ಕೆಸರಿನಲ್ಲಿ ಕಾಲಿಟ್ಟು, ಜೋಡಿ ಎತ್ತುಗಳೊಡನೆ, ಬಿಸಿಲಿನಲ್ಲಿ ಬೇಯುತ್ತ, ಕೈಯಲ್ಲಿ ಸಸಿಗಳನೆಲ್ಲ ದಿನವೆಲ್ಲಾ ಉತ್ತವರು
ಕೊಸರು ಕೊಸರಿನಲೂ ಚೌಕಾಸಿ ಮಾಡುತ್ತಾ ಪರಿ ಪರಿಯ ಸರಕನು ಇತರರಿಗೆ ಮಾರಿ ಲಾಭವನ್ನು ಏರಿಸಿದವರು

ಮತ್ಯಾರೂ ನಮ್ಮನ್ನು ಮುಟ್ಟದೇ ಇದ್ದರೂ, ಮತ್ತಿತರರ ಹೇಯ ಮಲಗಳ ಕೊಳಕನ್ನು ಮೂಗು ಮುಚ್ಚಿ ತೊಳೆದವರು 
ಕತ್ತಿ, ಕಠಾರಿ, ಬಿಲ್ಲು, ಬಾಣಗಳನು ಕುಲದಿಂದ ಕಲಿತ ಕುಶಲತೆಯಲಿ ಉರಿವ ಕುಲುಮೆಯ ಕೆಂಡದಿಂದ ಕಡೆದವರು

ನೂರಾರು ವರುಷಗಳ ಹಿಂದಿನ ನಮ್ಮೆಲ್ಲರ ಹೆಮ್ಮೆಯಾ ಪೂರ್ವಿಕರ ವಂಶ ಪಾರಂಪರ್ಯದ ಜೀವನ ಕಥೆಯು ಇದು
ಯಾರವರೆಲ್ಲಾ? ಮಾಡಿದರೇನೆಲ್ಲಾ? ಮಡಿಯಲ್ಲಿ, ದುಡಿತದಿಂದ, ನಡೆಯಲ್ಲಿ, ತುಡಿತದಿ ಹಿರಿಯರು ಚರಿತೆ ಹೇಳಿದ್ದು 

ಇಂದಿನ ಮಂದಿಗಳು ನಾವೆಲ್ಲಾ ಜೀವನಕೆ, ಭೋಜನಕೆ, ಭೋಗಕ್ಕೆ, ಕಾಲಕ್ಕೆ ತಕ್ಕಂತೆ ಆಗುತ್ತಾ ಮಾಡುವುದೇ ಬೇರೆ
ಸಂದ ಹಿಂದಿನದೆಲ್ಲಾ ನಮಗಿಲ್ಲ ಸಂಬಂಧ; ಇರಲೇ ಬೇಕೆಕೆ? ಈಗೆಲ್ಲಾ ನಾವೆಲ್ಲಾ ಆಗಿ ಹೋಗಿಯಾಗಿದೆ ಬೇರೆ ಬೇರೆ

ಜುಟ್ಟು ಕಟ್ಟುವುದಿಲ್ಲ; ಪಂಚೆಯ ಕಚ್ಚೆ ಕಾಲದ ಬಿರುಗಾಳಿಗೆ ಹಾರಿ, ಹಾರುವರ ದಾರಕ್ಕೆ, ಧರಿಸುವ ಧೋರಣೆ ಬದಲಾಗಿದೆ
ದಟ್ಟಿಯನಂತೂ ಬಿಸುಟು, ಆಟಾಟೋಪದ ಪ್ಯಾಂಟು, ಬಣ್ಣ, ಬಣ್ಣದ ಷರಟು, ಕೊರಳಿಗೆ ಕೌಪೀನವು ಬಲು ಬಿಗಿ ಆಗಿಬಿಟ್ಟಿದೆ

ಕತ್ತಿ ಮತ್ತಿತರ ಶಸ್ತ್ರ ಬೇಡೆಮಗೆ, ತೊಡೆಯೇರಿ ಕೂತಿದೆ ಕೀ ಬೋರ್ಡು ಕುಟ್ಟುವ ಲ್ಯಾಪು ಟಾಪು, ಐ ಪ್ಯಾಡು ಹಲಗೆ ಸಾಕು
ಎತ್ತಿನ ಗಾಡಿ, ಕುದುರೆಯ ಟಾಂಗಾ ಬದಲು, ನೂರಾರು ಅಶ್ವಗಳ ಬಲದಿ ಗುಡು ಗುಡು ಓಡುವ ಕಾರಿನ ಶೋಕಿಯೇ ಬೇಕು

ನಾಮಕ್ಕೆ ಪಂಗ ನಾಮ; ವಿಭೂತಿಯೆಲ್ಲಾ ಭಸ್ಮ; ಲಿಂಗವನ್ನು ಮನೆಯಲ್ಲೇ ಬಿಸುಟಾಯ್ತು, ಚಂದನ, ಮುದ್ರೆ ಅಳಿಸಾಯಿತು
ರಾಮ ನಾಮದ ಬದಲು, ಗಾಯತ್ರಿ ಮಾತೆಯ ಹೆಸರನ್ನೇ ಪೂರ್ತಿ ಮರೆತು, ಸಿನೆಮಾ ಸಂಗೀತವೇ ಮಹಾಮಂತ್ರವಾಯ್ತು

ನೀರಿನ ತೀರ್ಥಕ್ಕೆ ಕಿಂಚಿತ್ತೂ ರುಚಿಯಿಲ್ಲ; ಬೀರಿನ ಪರಮಾರ್ಥದ ಪರಿವರ್ತನೆಗೆ ಸಾಟಿಯಿಲ್ಲ; ಗಲಾಟೆ ಪಾರ್ಟೀ ಭಜನೆಯು
ಸಾರು, ಬಿಸಿಬೇಳೆ, ತೊಕ್ಕು, ಗೊಜ್ಜು, ಹೋಳಿಗೆ, ಫಳಿದ್ಯ, ಪುಳಿಯೋಗರೆ ಇದ್ದಕ್ಕಿದ್ದಂತೆ ಕೋಳಿಯ ಜನುಮ ತಾಳಿದ ಭೋಜನವು

ಹೋಮಕುಂಡವು ನೆಲದಿಂದ ಮೇಲೆ ಜಿಗಿದು, ತುಟಿಗಳ ಮಧ್ಯೆ ವಿರಾಜಿಸುತ ಹೊಗೆಯಾಡುತಿದೆ, ದಿನಕೆ ಹತ್ತಿಪ್ಪತ್ತು ಸಾರಿ
ಕಾಮ ಕೋಟಿ ಪೀಠದ ಆರಾಧಕ ಕಾಮ ಕೋತಿಗಳು, ತಾಳಿ ಬಿಗಿದ, ಬಿಗಿಸಿಕೊಂಡ ಕುರೂಪಿಯ ಬದಲು ಕೆಲಸಕ್ಕೆ ಪರಾರಿ

ಜಾತಿಗಳೆಲ್ಲಾ ಬದಲಾತಿ: ವೀರ ಅರಸರು ನೀರಸದ ಕಹಿ ಪ್ರೋಗ್ರಾಮಿ, ಹಾರುವರು ಬರೆಯುವರು ಜಾವಾ ಭಾಷೆ ಸಾಲುಗಳು
ತಂತಿಯೇ ಇಲ್ಲದ ಸಕಲ ಕರಣಗಳ ತಯಾರಿಸುವ ಕಾರಣರು; ಕುಸಿವ ಸೇತುವೆ ತಂತ್ರಿ, ಕಂತ್ರಿ ಮಂತ್ರಿ, ಕಂಪ್ಯೂಟರ್ ಶಿಲ್ಪಿಗಳು

ನಿಶಾಚರರಂತೆ ಕಾಲು ಸೆಂಟರಿನಲ್ಲಿ ದೂರದ, ಪರ ದೇಶದ, ಅಪರಿಚಿತರೊಡನೆ ಸಿಹಿಮಾತಿನ ವ್ಯಾಪರದಿ ಮಾರುವ ಆಚಾರ
ಕಾಶೀಯಾತ್ರೆಯ ನಾಟಕದ ಮದುವೆಯಾಗಿದ್ದರೂ, ಕತ್ತಲಲಿ ಕೆಲಸಕ್ಕೆ ತೊಲಗುವ ನೆಪದಲ್ಲಿ ಆಟವಾಡುವುದು ಹೋಟೆಲು ವ್ಯಭಿಚಾರ

ಸಂಸ್ಕೃತವೇ ಆಡುವುದು ಒಡನಾಡಿಗಳ ಜೊತೆಯಲ್ಲಿ ಬಾಯಲ್ಲಿ ನಾಲ್ಕಕ್ಷರದ ಆಂಗ್ಲ ಪೋಲಿ ಕೃಷ್ಣಾರಾಧನೆ ನರ ನಾರಿಯರ ಮಾತು
ಸಂಸ್ಕೃತಿಯ ಭಾರತವು ಚರಿತೆಯ ಕಾರಾಗೃಹದಲ್ಲಿ ಬಂಧಿತವಾಗಿ, ಹಿಂದೆ ಎಂದೂ ಇದ್ದಿಲ್ಲದ ಹೊಸ ಹುಸಿ ಧರ್ಮವೇ ಹೆಮ್ಮೆಯಾಯಿತು

ಕಾಲಕ್ಕೆ ನಿನ್ನೆಯ ಮತ್ತೆ ಕಾಂಬ ಕಣ್ಣಿಲ್ಲ, ಹಿಂದೆ ತಿರುಗಿ ನೋಡುವ ಬಲವಿಲ್ಲ, ಛಲವಿಲ್ಲ; ಮುಂದು ಹಿಂದಿನ ಜೊತೆಗೆ ಕಿಂಚಿತ್ತೂ ಸಂಭಂಧವಿಲ್ಲ
ಕಾಲ ರಾಯನ ರಥದ ಓಟವೆಲ್ಲಿ? ಅವನ ನಾಳಿನ ನಾಟಕದ ನಡೆಯೆಲ್ಲ ಹ್ಯಾಗೆ? ಇದನೆಲ್ಲಾ ಯಾತಕೂ ಕೆದಕಿ ಕೇಳುವುದು ನಿನ್ನ ಹಕ್ಕಲ್ಲ

No comments:

Post a Comment