Wednesday, February 29, 2012

ಎಂಜಲು ತಿಂದಿದ್ದೀರಾ?

ಎಂಜಲು ತಿಂದಿದ್ದೀರಾ?
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ಎಂಜಲು ಬಹಳ ಸಿಹಿ, ಜೇನು ತಿಂದುಗಿದರೆ
ಮರಿ ಹಕ್ಕಿ ನೀನಾದರೆ, ಅಮ್ಮನ ಎಂಜಿಲೇ ಅಲ್ಲವೇ ರುಚಿಯೂಟ

ನಲ್ಲೆ, ನಲ್ಲರು ಕಾಮಾತುರರಾಗಿ ತಿನ್ನುವರು, ತಿನಿಸುವರು ಎಂಜಲು
ಸಲ್ಲದು, ಒಲ್ಲದು ಎನುವುದಿಲ್ಲ; ಎಲ್ಲವನೂ ರುಚಿಸುವರಯ್ಯಾ
ಕೇಳಿಯಾಟದಲಿ ಭರ ಭರದ ಗತಿಯಲ್ಲಿ ಇಂದ್ರನರಮನೆಯನೇ
ತಲುಪುವರು, ತೇಲುವರು, ತೆವಳುವರು ಒಬ್ಬರೊಬ್ಬರ ಮೇಲೆ

ಋಷಿಗಳು, ಯೋಗಿಗಳು, ಜ್ಞಾನಿ, ವಿಜ್ಞಾನಿಗಳ ಎಂಜಲು ಬಲು ರುಚಿ
ಕೃಷಿ ಎಲ್ಲಾ ಅವರದೇ; ಅವರು ಮನದಲ್ಲಿ, ಧ್ಯಾನದಲಿ ಜಗಿದು, ಮೆದ್ದು,
ಈಷ ವಿದ್ಯೆಯ ಉಗಿದು ರಚಿಸಿದ ಮಹಾಕಾವ್ಯಗಳ ಮೆಲುಕು ಹಾಕುವೆವು

ಗಾಥೆ, ಗಾದೆ, ಗಹನ ವಿಷಯಗಳು ಬಾಯಿಂದ ಬಾಯಿಗೆ ಎಂಜಲಿನಂತೆಯೇ
ಮಥಿಸಿ, ಮಥಿಸಿ, ಯಾರ ಎಂಜಲೋ ತಿಳಿಯದೆ ಅಂಜದೆ ನುಂಗುವೆವು

ಹೊಚ್ಚ ಹೊಸ ಎಂಜಲು ಹಸನಾಗಿ, ಹದವಾಗಿ ಹಂಚುವ ಹುಚ್ಚು ಎನಗಯ್ಯಾ
ಉಚ್ಚ ಎಂಜಲ ತುಂತುರು, ಕೆಲವೊಮ್ಮೆ ಜಡೀ ಮಳೆಯೇ ಅಹುದು ಎನದಯ್ಯಾ

No comments:

Post a Comment