Dear Kannada Short Story Lover:
I am attaching my new short story "tuppa savarida moogu" in PDF form. I have also appended it to this email in Google Kannada transliteration format.Most people can read it. If you can view this appended format, you may set the right view option in your computer.

ತುಪ್ಪ ಸವರಿದ ಮೂಗು
ಕೆ. ಆರ್. ಎಸ್. ಮೂರ್ತಿ
ಮಸಾಲೆ ದೋಸೆಗೆ ಎಣ್ಣೆಯನ್ನೇ ಮುಟ್ಟಿಸುವುದಿಲ್ಲ; ತುಪ್ಪ ಹಾಕಿ ದೋಸೆ ಕಾವಲಿಯಮೇಲೆ ಹರಿಯುವುದು ದಿನ ನಿತ್ಯದ ವ್ರತ ಅವರ ಮನೆಯಲ್ಲಿ. ರೊಟ್ಟಿಗೆ, ಇಡ್ಲಿಗೆ ಕೊಬ್ಬರಿ ಚಟ್ನಿ, ಗೋಡಂಬಿ, ಬಾದಾಮಿ ಹಾಕಿ ಚಟ್ನಿ. ಅನ್ನ ಬೇಯಿಸಿವುದೇ ಹಸುವಿನ ಹಾಲಿನಲ್ಲಿ. ಕೇಸರಿ, ಏಲಕ್ಕಿ ಇದಕ್ಕೆ ಬರಿಯ ಅಲಂಕಾರಕ್ಕಲ್ಲ, ಸೌಟಿನಲ್ಲಿ ಹಾಕಿ ಬೆರೆಸುವುದು ಸ್ವಾಮಿ. ನೀರು ಅನ್ನದ ಹತ್ತಿರವೇ ತರುವುದಿಲ್ಲ, ಪುರಂದರ ದಾಸರ ಭಾಗ್ಯದ ಲಕ್ಷ್ಮಿ ಇವರ ಸೌಧದಲ್ಲಿ ಠಿಕಾಣಿ ಹಾಕಿದ್ದಳು. ಇವರೆಲ್ಲ ಕುಬೇರನ ಮಕ್ಕಳು. ಊಟ ಮಾಡುವುದು ಸುವರ್ಣದ ತಟ್ಟೆಯಲ್ಲಿ. ನಾನೊಂದು ಸಾರಿ "ಎಷ್ಟೊಂದು ಚಿನ್ನದ ತಟ್ಟೆ ಇದೆ ನಿಮ್ಮನೇಲ್ಲಿ!" ಎಂದದ್ದಕ್ಕೆ, "ಅದು ಚಿನ್ನ ಅಲ್ಲ ಕಣೋ. 'ಸುವರ್ಣ' ಅನ್ನಬೇಕು" ಎಂದು ನನಗೆ ಸಂಸ್ಕೃತದ ಪಾಠವನ್ನೇ ಹೇಳಿಕೊಟ್ಟರು. ಇವರ ಮನೆಯ ಹುಡುಗರು ನನ್ನ ಬಾಲ್ಯ ಸ್ನೇಹಿತರು.
ನೀವು ಬೇಜಾರು ಮಾಡ್ಕಳಲ್ಲ ಅಂದರೆ ಮಾತ್ರ ನಮ್ಮ ಮನೆ ದುಸ್ಥಿತಿ ಹೇಳ್ತೀನಿ. ತಗೊಳ್ಳಿ ನನ್ನ ಕರ್ಚೀಫು ಮೊದಲು. ನನ್ನ ಕಥೆ ಕೇಳಿದರೆ ನಿಮ್ಮ ಕಣ್ಣಿನಲ್ಲಿ ಧಾರಾಕಾರವಾಗಿ ಗಂಗೆ ಹರಿದರೆ ನನ್ನ ಭಗೀರಥ ಬ್ರಾಂಡ್ ಕರ್ಚೀಫು ಬೇಕೇ ಬೇಕಾಗತ್ತೆ.
ಬೆಳೆಯುವಾಗ, ನಮ್ಮ ಮನೆಯಲ್ಲಿ 'ತುಪ್ಪ' ಅಂದರೇನು, ಅದು ಹೇಗಿರುತ್ತೆ ಎನ್ನುವುದೇ ನಮಗೆ ಗೊತ್ತಿರಲಿಲ್ಲ. ನಾನು ನಮಗಿಂತ ಸ್ವಲ್ಪ ಮೇಲೆ ಇದ್ದವರ ಮನೆ ಹುಡುಗರ ಜತೆ ಆಟ ಆಡೋಣ ಅಂತ ಹೋಗಿದ್ದೆ. ನಾನು ಹೋಗುವ ಹೊತ್ತಿಗೆ, ಅವತ್ತಿನ ದಿನ ಹಬ್ಬ ಆದ್ದರಿಂದ, ಏನೇನೋ ಅಡಿಗೆ ಮಾಡಿದ್ದರು. "ನೀನೂ ಬಾರೋ ಊಟ ಮಾಡುವಿಯಂತೆ" ಅಂತ ಅವರ ತಾಯಿ ಕರೆದರು. ಅದಕ್ಕೆ ನಾನು, "ನನ್ನದು ಈಗ ತಾನೇ ಊಟ ಆಗಿದೆ" ಎಂದು ಸುಳ್ಳು ಹೇಳಿ ಹೊರಟು ಎದ್ದೆ. ಅದಕ್ಕೆ, ನನ್ನ ಸ್ನೇಹಿತ, "ಇಲ್ಲೇ ಕೂತುಕೊಳ್ಳೋ . ನಾನು ಬೇಗ ಊಟ ಮಾಡಿಕೊಂಡು ಬಂದು ಬಿಡ್ತೀನಿ" ಅಂದದ್ದಕ್ಕೆ ಸ್ವಲ್ಪ ದೂರದಲ್ಲಿ ಕುಳಿತುಕೊಂಡೆ.
ಇನ್ನೂ ತಟ್ಟೆ ಹಾಕುವ ಮುಂಚೆ, ಅವರ ತಾಯಿ ಮನೆಯ ಹುಡುಗರಿಗೆಲ್ಲ ಕರೆದು ಅದೇನೋ ಮೂಗಿನ ಮೇಲೆ ಹಚ್ಚಿದರು. ಅವರು
ಹಚ್ಚಿದ್ದು ಅದೇನೋ ಘಂ ಅಂತ ನಾನು ಕುಳಿತ ದೂರಕ್ಕೂ ಸುವಾಸನೆ ಬರುತ್ತಿತ್ತು. ಊಟ ಪ್ರಾರಂಭವಾಯಿತು. ಹುಡುಗರೆಲ್ಲ ಬಹಳ ಸಂತೋಷವಾಗಿ ಊಟ ಮಾಡಿ ಮುಗಿಸಿದರು. ನಾನು ಅವರ ತಾಯಿಯನ್ನು ಕೇಳಿದೆ, "ಅದೇನು ನೀವು ನಿಮ್ಮ ಹುಡುಗರಿಗೆಲ್ಲ ಏನೋ ಮೂಗಿಗೆ ಹಚ್ಚಿದ್ದು ನನಗೆ ಅರ್ಥವಾಗಲಿಲ್ಲ. ಅದೇನು ಶಾಸ್ತ್ರ? ನಮ್ಮಮ್ಮ ಆ ಶಾಸ್ತ್ರ ಮಾಡುವುದಿಲ್ಲ. ದಯವಿಟ್ಟು ಹೇಳಿ".
"ನೋಡಪ್ಪ, ನೀನು ಬಹಳ ಚಿಕ್ಕ ಹುಡುಗ. ನೀನು ಆಸಕ್ತಿಯಿಂದ ಕೇಳಿದ್ದಕ್ಕೆ ಹೇಳ್ತಾಯಿದ್ದೀನಿ. ಇದು ಮಾತ್ರ ನೀನೇ ಗುಟ್ಟಾಗಿ ಇಟ್ಟುಕೋ. ಯಾರ ಮನೆಯವರಿಗೂ ಬಾಯಿಬೇಡಬೇಡ, ಬಹಳ ಜೋಕೆ" ಅಂದರು. ತಕ್ಷಣ, ನಾನು ಎಂದಿನಂತೆ, "ಇಲ್ಲಾರೀ, ನಾನು ಯಾರಿಗೂ ಬಾಯಿಬಿಡುವುದಿಲ್ಲ, ನನ್ನ ತಾಯಿ ಆಣೆ" ಅಂದೆ. ಅವರು, "ಆಣೆ ಗೀಣೆ ಎಲ್ಲ ಇಡಬಾರದು ಮಗು" ಎಂದು ಹೇಳಿ ಮುಂದುವರಿಸಿದರು. "ನಮ್ಮ ಯಜಮಾನರಿಗೆ ಬಹಳ ಸಂಬಳ ಬರುವುದಿಲ್ಲ. ಮನೆ ತುಂಬಾ ಮಕ್ಕಳಿರುವುದರಿಂದ, ಹಬ್ಬ, ಹರಿದಿನಗಳಲ್ಲಿ, ಸ್ವಲ್ಪವೇ ಬೆಣ್ಣೆ ತಂದು, ಕಾಯಿಸಿ ತುಪ್ಪ ಮಾಡುತ್ತೇನೆ. ಹಬ್ಬದೂಟದ ಮೊದಲು, ಹುಡುಗರಿಗೆ ಸ್ವಲ್ಪ, ಸ್ವಲ್ಪ ತುಪ್ಪವನ್ನು ಅವರ ಮೂಗಿಗೆ ಹಚ್ಚುತ್ತೇನೆ. ಮಕ್ಕಳು ಮಾಡಿದ ಊಟಕ್ಕೆಲ್ಲ ಮೂಗಿನ ತುಪ್ಪದ ಸುವಾಸನೆ ಬರುವುದರಿಂದ, ಮಾಡಿದ ಊಟವೆಲ್ಲ ತುಪ್ಪದಲ್ಲೇ ಮಾಡಿದ ಹಬ್ಬದಡಿಗೆ ತಿಂದ ಹಾಗೆ ಅನ್ನಿಸುತ್ತದೆ". ಇದನ್ನು ಇವರಿಗೆ ಚಿಕ್ಕ ವಯಸ್ಸಿನಿಂದಲೇ ಮಾಡಿಸಿರುವುದರಿಂದ ಅವರಿಗೆ ಇದು ಅಭ್ಯಾಸವಾಗಿ ಮಾಡಿದ ಹಬ್ಬದ ಊಟವೆಲ್ಲ ಬಹಳ ರುಚಿಯಾಗಿದೆ ಅನ್ನಿಸುತ್ತದೆ."
ಒಟ್ಟಿಗೆ ಆಡಿ ಬೆಳೆದ ಹುಡುಗರು ನಾವು ಈಗ ಸಾವಿರಾರು ಮೈಲುಗಳು ದೂರ ಆಗಿ, ನಮ್ಮದೇ ಆದ ಜೀವನ ನಡೆಸಿಕೊಂಡು ಬಂದಿದ್ದೇವೆ.
ಕಡು ಬಡತನ, ನೀಗದ ದುಸ್ಥಿತಿ, ದಿನ ನಿತ್ಯ ಉಪವಾಸ. ಇದೆಲ್ಲ ನಿಮಗೆ ಅರ್ಥವಾಗಲಾರದು. ನಿಮ್ಮ ಮುಖದಲ್ಲಿ ಶ್ರೀಮಂತ ತನ ತುಂಬಿ ತುಳುಕುತ್ತಿದೆ. ಈಗಲೂ ತುಪ್ಪ ನನಗೆ ಒಪ್ಪುವುದೇ ಇಲ್ಲ. ತಿಳಿ ಸಾರು, ಯಾವುದಾದರೇನು ಒಂದು ತರಕಾರಿಯ ಜೊತೆಗೆ ಬೇಳೆ ಹುಳಿ. ತಿಂಗಳಿಗೊಂದು ಸಲ ಯಾವುದಾದರೂ ಪಲ್ಯ. ಅನ್ನ ಮಾತ್ರ ರೇಶನ್ ಅಕ್ಕಿ ಅಮೇರಿಕೆಯಲ್ಲಿ ಬೇಕೆಂದರೂ ಸಿಗುವುದಿಲ್ಲ. ಕರಿದ ತಿಂಡಿ ಚಿಕ್ಕ ವಯಸ್ಸಿನಿಂದಲೂ ತಿನ್ನುವ ಅಭ್ಯಾಸವಿಲ್ಲ. ಆಗ ಬಡತನ. ಈಗ ಹಣದ ಪ್ರಶ್ನೆಯಿಲ್ಲದಿದ್ದರೂ, ಚಿಕ್ಕ ವಯಸ್ಸಿನಲ್ಲಿ ಇದ್ದ ನಾಲಿಗೆ ಕಿಂಚಿತ್ತೋ ಬದಲಾಗಿಲ್ಲ. ದೇಹ ಬೆಳೆದರೂ, ಜಿಹ್ವೆಗೆ ಮಾತ್ರ ಬದಲಾಗುವುದಿಲ್ಲ ಎಂಬ ಹಠ. ನಾನು ಮೊದಲಿನಂತೆ ಗುಂಡು ಗೋವಿ. ನನ್ನ ಮಾತೋಶ್ರೀಯವರು ನನಗೆ ದಾನ ಮಾಡಿರುವ ಜೀನ್ಸ್ ಜೊತೆಗೆ ಅವರು ಕಲಿಸಿಕೊಟ್ಟಿರುವ ಆಹಾರಾಭ್ಯಾಸ. ಬಡತನ ನಮಗೆ ಆಶೀರ್ವಾದವಾಗಿ ಹೋಯಿತು.
ತುಪ್ಪದ ಮೂಗಿನ ಗೆಳೆಯ ಕೂಡ ಚೆನ್ನಾಗಿದ್ದಾನೆ. ಅವರ ತಾಯಿ ಕೂಡ ಈ ವಯಸ್ಸಿನಲ್ಲೂ ಗಟ್ಟಿಮುಟ್ಟಾಗಿ ಮೊಮ್ಮಕ್ಕಳನ್ನು ಆಡಿಸಿ ಕೊಂಡಿದ್ದಾರೆ. ಈಗಲೂ ಮೊಮೊಮ್ಮಕ್ಕಳ ಮೂಗಿಗೆ ಆರೋಗ್ಯದ ಆಶೀರ್ವಾದ ಲೇಪನ ಹಚ್ಚುತ್ತಾರಂತೆ.
ಚಿನ್ನದ ತಟ್ಟೆಯಲ್ಲಿ ಹಾಲನ್ನದ ಗೋಪುರ ಮಾಡಿ, ಅದರೊಳಗೆ ದೊಡ್ಡ ಪಾತಿ ಮಾಡಿ ತುಪ್ಪದ ಸಾಗರವನ್ನು ಹರಿಸಿ ಕಬಳಿಸುತ್ತಿದ್ದ ನನ್ನ ಬಾಲ್ಯ ಸೇಹಿತನಿಗೆ ತಲೆಯೆಲ್ಲ ಬೋಳು. ದಿನ ಬೆಳಿಗ್ಗೆ ಇನ್ನಿಲ್ಲದ ಬಗೆ ಬಗೆಯ ಖಾಯಿಲೆ, ಗೂರಲು ಧ್ವನಿ. ನೋಡಿದರೆ ನನ್ನ ಅಜ್ಜನ ಹಾಗೆ ಕಾಣುತ್ತಾನಂತೆ. ನನಗೆ ಅದು ಹೇಗೆ ಇನ್ನೂ ಗುಂಗರು ಕೂದಲು ದಟ್ಟವಾಗಿ ಬೆಳೆಯಿತ್ತಿದೆ ಎಂದು ಅವನಿಗೆ ಅರ್ಥವಾಗುತ್ತಿಲ್ಲ. ಅವನ ಅಣ್ಣ ತಮ್ಮಂದಿರೆಲ್ಲಾ, ಅಕ್ಕ ತಂಗಿಯರೆಲ್ಲಾ ಯಮರಾಜನ ಹಿಂದೆ ಹೋಗಿಯಾಯಿತಂತೆ.

No comments:
Post a Comment