Tuesday, February 7, 2012

ಯಾರನ್ನು ಪೂಜಿಸ ಬೇಕು?

ಯಾರನ್ನು ಪೂಜಿಸ ಬೇಕು?
ಕೆ. ಆರ್ ಎಸ್ ಮೂರ್ತಿ

ಕೃಷ್ಣನ ಕಾಲಿಗೆ ಬೀಳುವಿರಿ ಏಕೆ ಮರುಳು ಮನುಜರೆ  
ಅವನು ಕಳ್ಳರ ಕಳ್ಳ, ಸುಳ್ಳರ ಸುಳ್ಳ ಇದು ಮಾತ್ರ ಖರೆ

ಬೆಣ್ಣೆ ಮೆದ್ದು ಮಗುವಾಗಿ ಕಳ್ಳತನದಲಿ ಆಟವಾಡಿದ 
ಸುಳ್ಳು ಹೇಳಿದ ಎಲ್ಲ ಸುಂದರಿಯರಿಗೆ ಮಾಟ ಮಾಡಿದ

ಕುರೂಪಿ ರಕ್ಕಸಿಯ ಕುಚಗಳಿಗೆ ಬಾಯಿ ಹಾಕಿದ ಕಪ್ಪಣ್ಣ
ಅವನೊಬ್ಬ ಮೂರ್ಖ ರಸಿಕತೆಯ ಅರಿವಿಲ್ಲದ  ಪೆದ್ದಣ್ಣ

ಹೆತ್ತವಳ ಅಣ್ಣ, ಸ್ವಂತ ಸೋದರಮಾವನನೇ ಇವ ಕೊಂದ
ಪ್ರಾಣಿ ಹತ್ಯಾಕಾರಿ ಪಾಪಿ ಹಾವಾಡಿಗ ಕಾಳಿಂಗನನು ಕೊಂದ 

ಅಬಲೆ ಬೆತ್ತಲೆಯಲಿ ಅತ್ತಾಗ ಸಾವಿರ ಮೊಳದ ಸೀರೆ ಅಳೆದವ
ಒಮ್ಮೆ ಸೀರೆ ಕದ್ದವ ಆಗಿಬಿಟ್ಟ ದಿಢೀರನೆ ಬಟ್ಟೆ ಮಾರುವವ

ಶಿಖಂಡಿಗೆ ಹಿಂದೆ ಬಿದ್ದು ಮುದುಕನನು ಕೊಲ್ಲಿಸಿದ ನರನ ಬಾಣದಲಿ 
ಗುರುಗಳನು ಕೊಲ್ಲಿಸಿದ ಸತ್ಯವಂತನ ತುಟಿಯಲ್ಲಿ ಸುಳ್ಳ ನುಡಿಸುತಲಿ

ರಥದ ಚಕ್ರವ ಎತ್ತಿ ಮಂಡಿಯೂರಿದ ಅಸಮಾನ ವೀರ ನಿಜ ಕ್ಷತ್ರಿಯಗೆ  
ತಮ್ಮನಿಗೆ ಮಾಡಿದ ಮಂಕು, ಹೊಡಿಸಿದ ಶರಗಳನು ಅಗ್ರಜನ ಕೊರಳಿಗೆ

ಗಧೆಯ ಯುಧ್ಧದಲಿ ಧೀರ ಚಕ್ರವರ್ತಿಯನು ಸಮದಿ ಗೆಲ್ಲಲಾಗದು ಎಂದ
ಭೀಮನಿಗೆ ಬೋಧಿಸಿದ ಸಮರ ನ್ಯಾಯವನೇ ಮರೆತು ತೊಡೆಗೆ ಹೊಡೆಸಿದ

ಇಂಥವನ ಹೊಗಳುವುದು ಯಾತರ ಸರಿ? ಈ ಥರದ ಹುಟ್ಟು ಕಳ್ಳನನು
ಪೊಗಳಿದರೆ ನಿಮ್ಮ ಬಾಯಲ್ಲಿ ಬಿದ್ದೀತು ಹುಳ, ಸೇರುವಿರಿ ನರಕವನು

ನಾನ್ಯಾರು ಗೊತ್ತೇ ನಿಮಗೆ? ಬೊಮ್ಮನನೇ ಈ ಹೊಟ್ಟೆಯಲಿ ಬೆಳೆಸಿದವನು
ಸಕಲ ಕಾರಣ ನಾನೇ! ಹಿಡಿಯಿರಿ ನನ್ನ ಕಾಲನ್ನು, ಈಗ ತಾನೇ ತೊಳೆದಿಹೆನು

ನಿಮ್ಮ ಬಳಗ ಬಂಧುಗಳನೆಲ್ಲ ಕರೆತನ್ನಿ ಬಲು ಬೇಗ, ತನ್ನಿರೀ ಬಂಗಾರವನು
ಬಂಡಿ ಬಂಡಿಗಳಲಿ ಪೇರಿಸಿರಿ, ಭಕ್ತಿ, ಭಯಗಳಲಿ ಹೊಗಳುತ್ತ ನನ್ನ ನಾಮವನು

ನಿಮಗೆಲ್ಲ ಕೊಡುವೆ ಭರವಸೆ ನಾಕದಲಿ ಮುತ್ತು ರತ್ನಗಳ ಅರಮನೆಯ ವಾಸವನು
ನನದಾಗಲಿ ನಿಮ್ಮ ಸಂಪತ್ತು, ಈ ಭೂಲೋಕದಲಿ ನಡೆಸುವೆನು ನನ್ನ ರಾಜ್ಯಭಾರನು  

No comments:

Post a Comment