Friday, February 3, 2012

ಕೇಳಿ! ನನ್ನ "ಸತ್ಯ" ಕತೆ ಕೇಳಿ

ಕೇಳಿ! ನನ್ನ "ಸತ್ಯ" ಕತೆ ಕೇಳಿ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ಸತ್ತು ನರಕದ ಕಡೆಗೆ ಬಹು ಬೇಗ ಧಾವಿಸಿದೆನಯ್ಯ
ಆತುರದಲ್ಲಿ ಸತ್ತೆನೆಂಬ ಕೊಂಕು ಆಡಿದ ಕಂಕರಾಯ

ನಾನು:
ಏತಕಿಂತಹ ಅಪವಾದವೋ ಹೇ ಕಾಲ ಮಹಾಶಯ?

ಅವನು:
ಅತಿಮತಿಯವನೆಂದೂ, ಹಕ್ಕು ನಿನ್ನದೆಂದೂ ತಿಳಿದೆಯಾ?
ಗತಿಯಾವುದೂ ನಿನ್ನ ಹಕ್ಕಲ್ಲ; ನನ್ನ ಹೆಸರು ಕಾಲರಾಯ
ಸತ್ತಿಲ್ಲ ನೀನಿನ್ನೂ; ಎತ್ತಲಿಂದ ಬಂದೆಯೋ ಅತ್ತ ಹೋಗಯ್ಯಾ.

ನಾನು:
ಹೆತ್ತಮ್ಮನಿಗೂ ಹಕ್ಕಿಲ್ಲದೆ, ಹೆರುವ ಕಾಲವನೂ ನಿನ್ನದೆಂದೆ
ಕಿತ್ತು ಕೊಂಡೆ ನಾ ಹುಟ್ಟುವ ಅಥವಾ ಇಲ್ಲದನು ನನ್ನಿಂದೆ
ಇತ್ತ ನರಕಕ್ಕೆ ಹೊಕ್ಕು ಆನಂದದಿ ನೆಮ್ಮದಿ ಬೇಕೆಂದೇ ಬಂದೆ
ಇತ್ತು ಬಿಡು ಮಹರಾಯ; ಅತ್ತ ಬದುಕಿನಲಿ ಸುಖವೇನಿದೆ?
ಸೊತ್ತಿಲ್ಲ, ನೀತಿ ನಿಯಮಗಳಿಲ್ಲ; ಸತ್ಯವಂತರಿಗೆ ಸಿಗುವುದೇನಿದೆ?
ಅತ್ತು ಅಂಗೈ ನೀಡಿ ಬೇಡುವವರಿಗೆ ಎರಡು ಕಾಸೂ ಸಿಗುವುದೇ?
ಜಾತಿ ಹತ್ತಾರು, ಮತಗಳೂ ಬೇರೆ-ಬೇರೆ; ಜಗಳಗಳು ಮುಗಿಯದೆ?
ಸತ್ಯವಿದೆಲ್ಲಾ ನಿನ್ನ ಸೋಮಾರಿ ಧೂತರಿಗೆಲ್ಲಾ ಸ್ವಲ್ಪವೂ ಗೊತ್ತಿರದೇಕೆ?

ಅವನು:
ಅತಿ ಮಾತಿನ ಕೋತಿಯು ಕಣೋ ನೀನು; ನನ್ನ ರಾಜ್ಯದ ಬಗ್ಗೆ ಧೋರಣೆಯೂ?
ಎತ್ತಿಕೊಳ್ಳಿರೋ ಈ ತಲೆ ಹರಟೆ ವಟ ವಟ ಕಾಟಗಾರನ ಇದ್ದು ನನ್ನಪ್ಪಣೆಯೋ
ಕತ್ತಿಗೆ ಪಾಶವನು ಹಾಕಿ, ಮತ್ತೆ ಅದೇ ಭೂಕೂಪದ ನರಕದಲ್ಲಿ ತಳ್ಳಿ ಹಾಕೊಣವೋ
ನಿತ್ಯ ನರಕದಿಂದ ತಪ್ಪಿಸಿಕೊಂಡು ಓಡಿ ಬಂದಿಹನು; ಅದೇ ಶಿಕ್ಷೆ ನನ್ನ ಅಪ್ಪಣೆಯೋ

ನಾನು ಸ್ವಗತದಲ್ಲಿ:
ಬದುಕಿದೇನೋ ಬಡಜೀವ. ಯಡ್ಡಿ, ರೆಡ್ಡಿ, ರೌಡಿ ಕುಮಾರರ ಕೊರಮ ಗುಂಪನು ಸೇರುವೆನು
ಕದ್ದು ಬಡಜನರ ತಂಗಳೂಟವನೂ, ರೈತಾಪಿಗಳ ಕುಂಟೆ ಹೊಲಗಳನು ತೋಟಗಳನೂ
ಇದ್ದುದನು ಇದ್ದಹಾಗೆಯೇ ಹೇಳಿದೆನೆಂದು, ಪೆದ್ದಪ್ಪ ಯಮರಾಯನೂ ಮುನಿಸಿ ಹೋದನು
ಮುಂದು ಎಂದೂ ನೊಂದ ಹೃದಯವನು ಎಲ್ಲೆಲ್ಲೂ ವಟ ಗುಟ್ಟಿ, ನಿಶ್ಚಯದಿ ಬಿಚ್ಚಿ ಬಾಯಿ ಬಿಡೆನು

ನಾನು ಎಲ್ಲರಿಗೂ ಕೇಳುವ ಹಾಗೆ:
ಅಕ್ಕ, ತಂಗಿ, ಅಮ್ಮ, ಅಣ್ಣ, ಅಪ್ಪ ಕೇಳಿರೀ! ಕಿವಿಗೊಟ್ಟು ಕೇಳಿರೀ! ಸತ್ಯವೇ ನಮ್ಮ ಸೊತ್ತು, ಧನ
ಮುಕ್ಕೋಟಿ ದೇವತೆಗಳೆಲ್ಲ ನನ್ನ ಮಾತು ಕೇಳಿ! ದೇಶ ಸೇವೆಯ ಗೈಯುತಿಹರು ಮಂತ್ರಿಜನ
ರೊಕ್ಕ ನಿಮ್ಮದೆಲ್ಲವ ಕಾಣಿಕೆಯೆಂದು ನಂಬಿ ಮಂತ್ರಿಗಳ ಜೇಬಿನ ಹುಂಡಿಗೆ ಹಾಕುವುದೇ ಒಳ್ಳೆಯ ತನ
ಒಕ್ಕೊರಲಿನಲ್ಲಿ ಕೊಂಡಾಡಿ, ಅವರ ಕೊರಳಿಗೆ ಮಲ್ಲಿಗೆಯ ಹಾರವ ಹಾಕಿ, ಕಾಲು ಮುಟ್ಟಿ, ಮುತ್ತಿಡೋಣ!

No comments:

Post a Comment