Tuesday, February 7, 2012

ಹುಳಿಯನ್ನ, ಪುಳಿಯೋಗರೆ ನಾಲಗೆಗೆ ಒಂದೇ!

ಹುಳಿಯನ್ನ, ಪುಳಿಯೋಗರೆ ನಾಲಗೆಗೆ ಒಂದೇ!
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

This poem was composed in response to a Thats Kannada article on a similar topic

ಹುಳಿ, ಹುಳಿ, ಹುಳಿ - ಪುಳಿ, ಪುಳಿ, ಪುಳಿ ಎಂದು ಹೊಡೆದಾಡದಿರಿ
ಹುಳಿಯೂ, ಪುಳಿಯೂ, ಪುಲ್ಸೂ ಎಂದರೆ ಅರ್ಥವೂ ಒಂದೇ ಅಲ್ಲವೇ!

ಬೇಳೆ ಹಾಕಿ ಮಾಡಿದ ಹುಳಿಗೆ, ಅಣ್ಣ ಕಲಸಿ ಚಪ್ಪರಿಸುವರಿಗೆ
ಬೇಳೆ ಅರ್ಧ ಬೆಂದಾಗ, ಅಕ್ಕಿ ನೆನೆಸಿಹಾಕಿ, ನಿಮ್ಮ ನಾಲಗೆಗೆ

ಜೊಲ್ಲು ಸುರಿಸುವವರೆಗೂ ಸಕಲ ಮಸಾಲೆ, ಥರಥರ ತರಕಾರಿಗೆ
ಒಪ್ಪುವ ಹಾಗೆ ಬೆರೆಸಿ, ಚೆನ್ನಾಗಿ ಕಲಸುತ್ತಾ,ತಳ ಸೀದೆದದ ಹಾಗೆ

ಕೊನೆಗೆ ತುಪ್ಪದ ಒಗ್ಗರಣೆ ಮನೆಯೊಳಗೂ, ಹೊರಗೂ ಘಮಘಮಿಸಿ
ಮಕ್ಕಳಿಗೆ ಬಡಿಸಿದ ನಮ್ಮಮ್ಮನಿಗೆ ಮಾತ್ರ ಗೊತ್ತು ನಳ, ಭೀಮರ ಗುಟ್ಟು

ಒಂದು ದೊಡ್ಡ ಧಿಟ್ಟ ನಾಮ ಹಣೆಮೇಲೆ ಹಚ್ಚಿದ ಅಯ್ಯಂಗಾರರಿಗೆ ಗೊತ್ತು
ಪುಳಿ, ಅನ್ನ, ಸುವಾಸನೆಯ ಮಸಾಲೆ, ಮತ್ತೆ ಎಳ್ಳು, ಕಡಲೆ, ಸಾಸಿವೆ, ಉದ್ದು

ಕಡಲೆ ಕಾಯಿ ಬೀಜ, ಬೇಕಾದರೆ ಗೋಡಂಬಿ, ಕೊನೆಗೆ ಕರಿಬೇವು ಒಗ್ಗರಣೆ ಇಟ್ಟು
ಹದವಾಗಿ ಕಲಸಿ, ಕೊಳಂದೆಗಳಿಗೆಲ್ಲ ಬಡಿಸಿ, ಬೆಳ್ಳಗಿನ ಹುಡುಗ ನನಗೂ ಕೊಟ್ಟು

ನನ್ನನ್ನೂ ಅಯ್ಯಂಗಾರಿ ಮಾಡಿದ, ನನ್ನ ನಾಲಗೆಯನು ರುಚಿಯ ಸ್ವರ್ಗಕ್ಕೆ ಕಳಿಸಿ 
ಮಸ್ತಿಕದ ಮೇಲೆ ಪುಳಿಯೋಗರೆಯ ನಿಜ ರುಚಿಯ ವಿಶ್ವ ರೂಪ ದರ್ಶನ ಮಾಡಿಸಿ

ಮೆಕ್ಸಿಕನ್ನರ ಕನ್ಯೆ ಒಲವಿನಿಂದ ಹಾಕಿದ ದೋಸೆ
ಅದರ ಜೊತೆ ದಂತದ ಮಯಿನ ಸುಂದರಿಯ ಪಲ್ಯ
ಕೊರಿಯನ್ನ ಕನ್ನಿಕೆ ಅರೆದು ಮಾಡಿದ ತೆಂಗಿನ ಚಟ್ನಿ 
ಸುಂದರಿ ಚೈನೀಸ್ ಮಾಡಿದ ಈರುಳ್ಳಿ ಹುಳಿಯೂ
ಅಮ್ಮ ಅನ್ನಪೂರ್ನೆಯೇ ಧರೆಗೆ ಇಳಿದು ಬಂದಂತೆ

ಕಾಳಿದಾಸನ ಭೀಮ ಪಾಕ ಮೈಸೂರು ಪಾಕೂ
ತುರುಕ ಮಾಡಿದ ಗರಿಗರಿಯ ಚಕ್ಕುಲಿ ಮುರುಕೂ
ಯಹೂದ್ಯನ ಬಾಂಡ್ಲೆಯ ಕಡೆಲೆಯ ಅಂಬೊಡೆಯೂ
ಇಟಾಲಿಯನ್ನನ ಟೊಮೇಟೊ ಗೊಜ್ಜಿನ  ರೊಟ್ಟಿಯೂ
ನಳ ಮಹಾರಾಜನ ಮೃಷ್ಟಾನ ಭೋಜನ ಉಂಡಂತೆ 

ನಾಮ, ವಿಭೂತಿ, ಚಂದನ, ಪರಿಪರಿಯ ಲೇಪನದ ಸುಗಂಧ
ಜಪಮಣಿ, ತುಳಸೀ ಮಾಲೆ, ದಾರ, ಲಿಂಗ, ಆಭರಣದ ಚೆಂದ
ಹೊರಗುಂಟು, ಒಳಗಿಲ್ಲ; ಹಸಿದ ಹೊಟ್ಟೆಗೆ ಈ ಅವತಾರ ಒಂದೇ!
ಜಿಹ್ವಕೆ ಉಂಟೇ ಕುಲ ಜಾತಿ, ಒಳಜಾತಿ, ದೇಶಗಳ  ವಿವಿಧ ಬೇಧ!
ಅನ್ನಪೂರ್ಣೆಗೆ ನಾವು, ನೀವು, ಎಲ್ಲ ದೇಶದ ಮಕ್ಕಳ ಹಸಿವೂ ಒಂದೇ

No comments:

Post a Comment