Friday, February 3, 2012

ಸತ್ಯವತಿಗೆ ಸವತಿಯ ಕಾಟ


ಸತ್ಯವತಿಗೆ ಸವತಿಯ ಕಾಟ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ಸತ್ಯವತಿಗೆ ಮಕ್ಕಳಿಲ್ಲದ ಚಿಂತೆಯಾಗಿತ್ತಂತೆ
ಬತ್ತಿಹೋಗುವ, ಬಂಜೆಯಾಗುವ ಅಂಜಿಕೆಯಂತೆ

ಮುಕ್ಕೋಟಿ ದೇವರನು ಕಾಲ್ಮುಟ್ಟಿ ಬೇಡಿದಳಂತೆ
ಒಕ್ಕೊರಲಿನಲಿ ದೇವ ಕೂಟವು ಹರಸಿದರಂತೆ

ಶ್ರೀಮಂತದ ಸಂಭ್ರಮಕೆ ಬ್ರಹ್ಮಾಂಡವೇ ಬಂತಂತೆ
ಪ್ರೀತಿಯಲಿ ಜಗವೆಲ್ಲಾ ಸತ್ಯ ಶಿಶುವಿಗೆ ಕಾದಿದ್ದರಂತೆ

ಇತ್ತ ಸತ್ಯವತಿಯ ಸವತಿಗೆ ನೂರಾರು ಮಕ್ಕಳಂತೆ
ಹೆತ್ತ ಸಂತಾನಕೆ ಸಾವಿರಾರು ಕುರೂಪಿ ಮುಖಗಳಂತೆ 

ಸತ್ಯ ಕಂದನು ತಾಯಿಯ ಅಂಡದಲೇ ಅಡಗಿತ್ತಂತೆ
ನಿತ್ಯ ಕಾದೂ ಕಾದೂ ಬೇಸತ್ತು ಜಗವೆಲ್ಲ ಅತ್ತರಂತೆ

ಹೊತ್ತ ತಾಯಿಯು ಹೆರುವ ಆಸೆಯಲಿ ಕಣ್ಣೀರಿಟ್ಟಳಂತೆ
ಸತ್ಯ ಮಗುವಿಗೆ ಹುಟ್ಟುವ ಭಯ ಕಾಡುತಿರಬಹುದಂತೆ

ಸವತಿ ಸಂತಾನವೆಲ್ಲಾ ಬೆಳೆದು ಗುಣೀಕರಿಸಿ ಬಿಟ್ಟವಂತೆ
ಹೆತ್ತರೆ ಸವತಿ ಸೇನೆಯು ಸತ್ಯವನು ಕತ್ತರಿಸುವರೆಂಬ ಚಿಂತೆ

ಹುಟ್ಟಿದರೆ ಒಂದೇ ಮಗುವಾದರೆ ಅದು ನೀಗದ ಶಾಪವಂತೆ
ಗುಟ್ಟಾಗಿಯೇ ಹೊಟ್ಟೆಯಲೇ ಉಳಿದು ಇದ್ದರೇ ಕ್ಷೇಮವಂತೆ!

No comments:

Post a Comment